ರಾಮನಗರ: ಸಿದ್ದರಾಮಯ್ಯ ಹೊಸ ಪಕ್ಷ ಕಟ್ಟಿ 5 ಸ್ಥಾನ ಗೆಲ್ಲಲಿ ಎಂಬ ಮಾಜಿ ಸಿಎಂ ಹೆಚ್.ಡಿ.ಕೆ ಸವಾಲಿಗೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ನಾನ್ಯಾಕೆ ಹೊಸ ಪಕ್ಷ ಕಟ್ಟಲಿ ಎಂದು ಪ್ರಶ್ನಿಸಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಾನ್ಯಾಕೆ ಹೊಸ ಪಕ್ಷ ಕಟ್ಟಬೇಕು? ಹೆಚ್.ಡಿ. ಕುಮಾರಸ್ವಾಮಿ ಹೇಳಿದ ಅಂತ ಹೊಸ ಪಕ್ಷ ಕಟ್ಟಲಾ? ಎಂದು ಕೇಳಿದ್ದಾರೆ.
ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ಬಿಜೆಪಿಯೊಂದಿಗೆ ಕೈ ಜೋಡಿಸಿದವರು ಯಾರು ? ಜೆಡಿಎಸ್ ನವರು ಕಾಂಗ್ರೆಸ್ ವೋಟ್ ವಿಭಜಿಸಲು ಯತ್ನಿಸಿತ್ತಿದ್ದಾರೆ. ನಮ್ಮ ವೋಟ್ ಒಡೆದು ಬಿಜೆಪಿಗೆ ಅನುಕೂಲ ಮಾಡಿಕೊಡಲು ಹೊರಟಿದ್ದಾರೆ. ನಾನು ಸಿಎಂ ಆಗಿದ್ದಾಗ ಯಾವುದೇ ಜಾತಿ ನೋಡುತ್ತಿರಲಿಲ್ಲ. ಹಸಿವು ಒಂದೊಂದು ಜಾತಿಗೆ ಒಂದೊಂದು ರೀತಿ ಇರಲ್ಲ. ಬಡಜನರಿಗಾಗಿ ಅನ್ನಭಾಗ್ಯ ಯೋಜನೆಯಡಿ 5ಕೆಜಿ ಉಚಿತ ಅಕ್ಕಿ ಜಾರಿಗೆ ತಂದೆ. ಬಿಜೆಪಿ ದುರಾಡಳಿತದಲ್ಲಿ ಜನ ಜೀವನ ಮಾಡುವುದೆ ಕಷ್ಟವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಜನಸಾಮಾನ್ಯರ ಬದುಕು ಹಸನಾಗಲಿದೆ ಎಂದು ಹೇಳಿದರು.