ದೇಶದಲ್ಲಿ ನಿಂಬೆಹಣ್ಣಿನ ಬೆಲೆ ಮುಗಿಲು ಮುಟ್ಟಿದೆ. ಇಂಧನ ಬೆಲೆ ಜೊತೆ ಅಗತ್ಯ ವಸ್ತುಗಳ ದರಗಳೂ ಹೆಚ್ಚಳವಾಗುತ್ತಿದ್ದು, ಈ ಪೈಕಿ ನಿಂಬೆಹಣ್ಣು ಸಹ ಒಂದು. ಲಕ್ನೋದಲ್ಲಿ, ನಿಂಬೆಹಣ್ಣು ಪ್ರತಿ ಕೆ.ಜಿ.ಗೆ 325 ರೂ. ಮತ್ತು ಪ್ರತಿ ಕಾಯಿ ರೂ. 13ಕ್ಕೆ ಮಾರಾಟವಾಗುತ್ತಿದೆ. ಹೀಗಾಗಿ ಕಳ್ಳರು ಉತ್ತರ ಪ್ರದೇಶದಲ್ಲಿ ನಿಂಬೆಹಣ್ಣನ್ನು ಸಹ ಬಿಡುತ್ತಿಲ್ಲ.
ಕೆಲ ದಿನಗಳ ಹಿಂದಷ್ಟೇ ಶಹಜಾನ್‌ಪುರದಲ್ಲಿ ಕಳ್ಳರು ತರಕಾರಿ ವ್ಯಾಪಾರಿಯ ಗೋಡೌನ್‌ನಲ್ಲಿ ಸಂಗ್ರಹಿಸಲಾಗಿದ್ದ 60 ಕೆ.ಜಿ ನಿಂಬೆಯನ್ನು ಕದ್ದಿದ್ದರು. ಇದೀಗ ಕಾನ್ಪುರದಲ್ಲಿ ನಿಂಬೆಹಣ್ಣಿನ ಕಳ್ಳತನ ನಡೆದಿದೆ.
ಕಳೆದ ನಾಲ್ಕು ದಿನಗಳಲ್ಲಿ ಕಳ್ಳರು 750 ಕೆಜಿ ತೂಕದ 15 ಸಾವಿರ ನಿಂಬೆಹಣ್ಣುಗಳನ್ನು ಕಳವು ಮಾಡಿದ್ದಾರೆ. ಇದರಿಂದ ಕಂಗೆಟ್ಟಿರುವ ತರಕಾರಿ ವ್ಯಾಪಾರಿಗಳು ನಿಂಬೆಹಣ್ಣು ರಕ್ಷಿಸಿಕೊಳ್ಳಲು ಭದ್ರತಾ ಸಿಬ್ಬಂದಿ ನೇಮಕಕ್ಕೆ ಮುಂದಾಗಿದ್ದಾರೆ.
ಕೆಲವರು ಸ್ವತಃ ತಾವೇ ಲಾಠಿ ಹಿಡಿದು ನಿಂಬೆಹಣ್ಣುಗಳನ್ನು ಕಾಯುತ್ತಿದ್ದರೆ ದೊಡ್ಡ ಪ್ರಮಾಣದಲ್ಲಿ ನಿಂಬೆಹಣ್ಣು ಇಟ್ಟುಕೊಂಡವರು ಭದ್ರತಾ ಸಿಬ್ಬಂದಿ ನೇಮಿಸಿಕೊಂಡಿದ್ದಾರೆನ್ನಲಾಗಿದೆ.