ಬೆಂಗಳೂರು: ಇನ್ಸ್ ಪೆಕ್ಟರ್ ನಂದೀಶ್ ಹೃದಯಾಘಾತದಿಂದ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ತೀವ್ರ ಒತ್ತಡದಿಂದಾಗಿ ಇನ್ಸ್ ಪೆಕ್ಟರ್ ನಂದೀಶ್ ಗೆ ಹೃದಯಾಘಾತವಾಗಿದೆ ಎಂದು ಅವರ ಪತ್ನಿ ತಿಳಿಸಿದ್ದಾರೆ. ಅವರಿಗೆ ಇದ್ದ ಅಂತಹ ಒತ್ತಡಗಳಾದರೂ ಏನು? ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಕೆ.ಆರ್.ಪುರ ವಿಭಾಗದ ಪಬ್ ಒಂದು ನಂದೀಶ್ ವ್ಯಾಪ್ತಿಯಲ್ಲಿ ಇತ್ತು. ನಿಗದಿತ ಸಮಯಕ್ಕಿಂತ ಹೆಚ್ಚು ಕಾಲ ಪಬ್ ಓಪನ್ ಮಾಡಲು ಅವಕಾಶ ಕೊಟ್ಟಿದ್ದಕ್ಕೆ ನಂದೀಶ್ ಅಮಾನತು ಮಾಡಲಾಗಿತ್ತು. ಸರ್ಕಾರವೇ 1 ಗಂಟೆಯವರೆಗೆ ಪಬ್ ತೆರೆಯಲು ಅವಕಾಶ ಕೊಟ್ಟಿದೆ. ಹೀಗಿರುವಾಗ ಆ ಪಬ್ ಎಷ್ಟು ಹೊತ್ತು ತೆಗೆದಿತ್ತು? ಅಲ್ಲಿ ಇದ್ದವರು ಯಾರು ಯಾರು? ಬೆಳಗಿನವರೆಗೆ ಪಬ್ ತೆಗೆದಿತ್ತು ಎನ್ನಲಾಗಿದೆ ರಾಜಕಾರಣಿ ಬೆಂಬಲಿಗರು ಅಲ್ಲಿ ಯಾರೆಲ್ಲ ಇದ್ದರು? ಪೊಲೀಸ್ ಅಧಿಕಾರಿ ಕೂಡ ಪಬ್ ನಲ್ಲಿ ಡ್ಯಾನ್ಸ್ ಮಾಡಿದ್ದಾರೆ ಎಂಬ ವರದಿ ಇದೆ. ಪಬ್ ನಲ್ಲಿ ಅನಧಿಕೃತವಾಗಿ ಕ್ಯಾಸಿನೋ, ಮಟ್ಕಾ ದಂಧೆ ಕೂಡ ನಡೆಯುತ್ತಿತ್ತು ಎಂದು ಹೇಳಲಾಗುತ್ತಿದೆ ಎಂದಿದ್ದಾರೆ.
70-80 ಲಕ್ಷ ರೂಪಾಯಿ ಕೊಟ್ಟು ಪೋಸ್ಟಿಂಗ್ ಮಾಡಿ, ನಂತರ ಹೀಗೆ ಆದಾಗ ಅವರು ಎಲ್ಲಿ ಹಣ ವಸೂಲಿ ಮಾಡಬೇಕು? ಇದು ಸರ್ಕಾರದ ನಡವಳಿಕೆಯಿಂದ ಆದ ಕಗ್ಗೊಲೆ. ನಂದೀಶ್ ಎಂ ಎಲ್ ಸಿಯೊಬ್ಬರ ಸಂಬಂಧಿ ಎಂದು ಹೆಳಲಾಗುತ್ತಿದೆ. ಮಾನಸಿಕ ಒತ್ತಡದಿಂದ ಹೃದಯಾಘಾತ ಎಂದು ಮನೆಯವರು ಹೇಳುತ್ತಿದ್ದಾರೆ. ಇದೆಲ್ಲದರ ಹಿಂದೆ ಸೂಕ್ತ ತನಿಖೆಯಾಗಲಿ. ಇನ್ಸ್ ಪೆಕ್ಟರ್ ಅಂತವರು ಹೀಗಾದರೆ ಇನ್ನು ಸಣ್ಣ ಹುದ್ದೆಯಲ್ಲಿದ್ದವರ ಗತಿಯೆನು? ಗೃಹ ಸಚಿವ ಅರಗ ಜ್ಞಾನೇಂದ್ರ ಈ ಬಗ್ಗೆ ಉತ್ತರ ನೀಡಲಿ ಎಂದು ಆಗ್ರಹಿಸಿದರು.