ಹಾವೇರಿ: ಹೊಟ್ಟೆನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯರ ಗರ್ಭಕೋಶ ಶಸ್ತ್ರಚಿಕಿತ್ಸೆ ನಡೆಸಿ ವೈದ್ಯರು ವಂಚಿಸಿರುವ ಘಟನೆ ಸಿಎಂ ಬಸವರಾಜ್ ಬೊಮ್ಮಾಯಿ ತವರು ಜಿಲ್ಲೆ ಹಾವೇರಿಯಲ್ಲಿ ನಡೆದಿದ್ದು, ಆಕ್ರೋಶಗೊಂಡ ಮಹಿಳೆಯರು ಪ್ರತಿಭಟನಾ ಪಾದಯಾತ್ರೆ ನಡೆಸಿ ಪರಿಹಾರಕ್ಕೆ ಪಟ್ಟುಹಿಡಿದ್ದಾರೆ.
ರಾಣೆಬೆನ್ನೂರು ತಾಲೂಕು ಸರಕಾರಿ ಆಸ್ಪತ್ರೆ ವೈದ್ಯ ಡಾ. ಪಿ.ಶಾಂತ, ಹುಷಾರಿಲ್ಲ ಎಂದು ಆಸ್ಪತ್ರೆಗೆ ಬಂದಿದ್ದ ಬರೋಬ್ಬರಿ 1,522 ಮಹಿಳೆಯರ ಗರ್ಭಕೋಶ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶಸ್ತ್ರಚಿಕಿತ್ಸೆ ಬಳಿಕ ಹಲವು ಸಮಸ್ಯೆಗಳಿಂದ ಬಳಲುತ್ತಿರುವ ಮಹಿಳೆಯರು ಇದೀಗ ಪರಿಹಾರಕ್ಕಾಗಿ ಆಗ್ರಹಿಸಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಶಿಗ್ಗಾಂವಿ ನಿವಾಸಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದು, ವೈದ್ಯರ ಅಮಾನತ್ತಿಗೆ ಒತ್ತಾಯಿಸಿದ್ದಾರೆ.
ನಿನ್ನೆಯಿಂದ ಪ್ರತಿಭಟನೆ ಪಾದಯಾತ್ರೆ ಹೊರಟಿರುವ ಮಹಿಳೆಯರು ಗಂಟು ಮೂಟೆ ಕಟ್ಟಿಕೊಂಡು, ಬಿಸಿಲ ಝಳವನ್ನೂ ಲೆಕ್ಕಿಸದೇ ಸಾಗಿದ್ದಾರೆ. ನಾಳೆ ಮುಖ್ಯಮಂತ್ರಿಗಳ ಶಿಗ್ಗಾಂವಿ ನಿವಾಸ ತಲುಪಲಿರುವ ಪ್ರತಿಭಟನಾ ನಿರತ ಮಹಿಳೆಯರನ್ನು ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮಧ್ಯೆಯೇ ಮನವೊಲಿಸಲು ಪೊಲೀಸರು ಹಾಗೂ ಅಧಿಕಾರಿಗಳು ಯತ್ನಿಸಿದ್ದಾರೆ. ಆದರೆ ಯಾವುದಕ್ಕೂ ಒಪ್ಪದ ಮಹಿಳೆಯರು ಪಾದಯಾತ್ರೆ ಮುಂದುವರೆಸಿದ್ದಾರೆ. ನಮಗೆ ವಿಶೇಷ ಆರ್ಥಿಕ ನೆರವು ನೀಡಬೇಕು ಹಾಗೂ ಸರ್ಕಾರಿ ಆಸ್ಪತ್ರೆ ವೈದ್ಯರಾದ ಡಾ.ಶಾಂತರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.