ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿ ವಿವಾಹವಾಗಿದ್ದು, ಲವ್ ಜಿಹಾದ್ ಆರೋಪ ಕೇಳಿಬಂದಿತ್ತು. ಆದರೆ ಇದೀಗ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಹುಬ್ಬಳ್ಳಿಯ ಕಮರಿಪೇಟೆ ನಿವಾಸಿ ಸ್ನೇಹಾಳನ್ನು ಇಬ್ರಾಹಿಂ ಎಂಬ ಯುವಕ ಪ್ರೀತಿಸಿದ್ದ. ಏ.2ರಂದು ಗದಗದಲ್ಲಿ ಈ ಜೋಡಿ ರಿಜಿಸ್ಟ್ರಾರ್ ಮದುವೆಯಾಗಿದ್ದರು. ಆದರೆ ಯುವತಿ ಪೋಷಕರು ಯುವತಿ ಬ್ರೇನ್ ವಾಶ್ ಮಾಡಿ ಯುವಕ ವಿವಾಹವಾಗಿದ್ದಾನೆ ಎಂದು ಆರೋಪಿಸಿದ್ದರು.
ಅಲ್ಲದೇ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆ ಎದುರು ಯುವತಿ ಸಂಬಂಧಿಕರು ಪ್ರತಿಭಟನೆ ನಡೆಸಿದ್ದರು. ನಕಲಿ ದಾಖಲಾತಿ ಸೃಷ್ಟಿಸಿ ಹುಡಗ ವಿವಾಹವಾಗಿದ್ದಾನೆ. ತಾನು ಹಿಂದೂ ಎಂದು ಯುವತಿಯನ್ನು ಪರಿಚಯಿಸಿಕೊಂಡಿದ್ದ ಎಂದು ಆರೋಪಿಸಿದ್ದಾರೆ.
ಹಿಂದು ಯುವತಿ-ಮುಸ್ಲಿಂ ಯುವಕನ ವಿವಾಹ ಲವ್ ಜಿಹಾದ್ ಆರೋಪ ಕೇಳಿಬಂದಿದ್ದು, ನಾಳೆ ಮಧ್ಯಾಹ್ನದೊಳಗಾಗಿ ಯುವತಿಯನ್ನು ಪೊಲೀಸರು ವಾಪಸ್ ಕರೆತರದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದರು.
ಇದರ ಬೆನ್ನಲ್ಲೇ ಯುವತಿ ತಾನು ಒಪ್ಪಿಗೆಯಿಂದಲೇ ವಿವಾಹವಾಗಿದ್ದು, ತನ್ನ ಮೇಲೆ ಯಾವುದೇ ಒತ್ತಡವಿಲ್ಲ. ತಾನು ಇಬ್ರಾಹಿಂ ನನ್ನು ಪ್ರೀತಿಸುತ್ತಿದ್ದು, ಆತನ ಜತೆಯೇ ಇದ್ದೇನೆ. ಆದರೆ ತಾನು ಆತನ ಜತೆಗಿರುವುದು ಇಬ್ರಾಹಿಂ ಮನೆಯವರಿಗೆ ತಿಳಿದಿಲ್ಲ ಎಂದು ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾಳೆ.