ಹುಬ್ಬಳ್ಳಿ: ಆರ್.ಎಸ್.ಎಸ್ ಚಡ್ಡಿ ಸುಡುತ್ತೇವೆ ಎಂದು ಹೇಳಿಕೆ ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಹೀಗೆ ಮಾಡಿಯೇ ಕಾಂಗ್ರೆಸ್ ಎಲ್ಲಾ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಕಳೆದ 75 ವರ್ಷಗಳಿಂದ ಆರ್.ಎಸ್.ಎಸ್ ಜನಸೇವೆ ಮಾಡುತ್ತಿದೆ. ದೇಶದಲ್ಲಿ ಹಲವು ಅನಾಹುತ ಸಂಭವಿಸಿದಾಗ, ಜನರು ಸಂಕಷ್ಟದಲ್ಲಿದ್ದಾಗ ಆರ್.ಎಸ್.ಎಸ್.ಎಸ್ ಸಹಾಯ ಮಾಡಿದೆ. ಇದನ್ನು ಸಹಿಸಲಾಗದೇ ಕಾಂಗ್ರೆಸ್, ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಆರ್.ಎಸ್.ಎಸ್ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಹೀಗೆ ಮಾಡಿಯೇ ಕಾಂಗ್ರೆಸ್ ಎಲ್ಲೆಡೆ ಅಧಿಕಾರ ಕಳೆದುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿಯೂ ಕಾಂಗ್ರೆಸ್ ನೆಲೆ ಕಳೆದುಕೊಳ್ಳಲಿದೆ ಎಂದು ಗುಡುಗಿದರು.