ದಾವಣಗೆರೆ: ಕಾಂಗ್ರೆಸ್ ನಾಯಕರ ರಾಜಭವನ ಚಲೋ ಪ್ರತಿಭಟನೆ ಬಗ್ಗೆ ಕಿಡಿ ಕಾರಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಕಾನೂನುಬಾಹಿರ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ನವರು ಹೋರಾಟ ನಡೆಸುತ್ತಿರುವುದು ಕಾಂಗ್ರೆಸ್ ನವರ ದುರಂತ ಎಂದು ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಸಿಎಂ ಬೊಮ್ಮಯಿ, ಕಾಂಗ್ರೆಸ್ ನವರು ಈ ರೀತಿ ಹೋರಾಟ ಮಾಡಿದರೆ ಜನರು ಅವರನ್ನು ನಿಮ್ಮ ನಿಮ್ಮ ಮನೆಗೆ ಚಲೋ ಅಂತಾರೆ. ಕಾನೂನುಬಾಹಿರ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಹೋರಾಡುತ್ತಿರುವುದೇ ಒಂದು ದೊಡ್ಡ ದುರಂತ ಎಂದು ಹೇಳಿದರು.
ಇದೇ ವೇಳೆ ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ತಪ್ಪುಗಳಿದ್ದರೆ ಸರಿಪಡಿಸಲು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಸೂಚನೆ ನೀಡಿದ್ದೇನೆ. ಯಾವುದೇ ಸಲಹೆ ಸೂಚನೆಗಳಿದ್ದರೂ ಕೊಡಬಹುದು. ಹಿಂದಿನ ಪಠ್ಯ ಪುಸ್ತಕದ ಬಗ್ಗೆಯೂ ಆಕ್ಷೇಪಣೆಗಳಿವೆ. ಹೀಗಾಗಿ ಯಾವುದನ್ನು ಸರಿಪಡಿಸಬೇಕು, ಯಾವುದನ್ನು ಸರಿಪಡಿಸುವ ಅಗತ್ಯವಿಲ್ಲ ಎಂಬುದನ್ನು ನೋಡಿ ಸರಿಪಡಿಸುವಂತೆ ಹೇಳಲಾಗಿದೆ. ಸಚಿವರು ಪರಿಶೀಲನೆ ನಡೆಸುತ್ತಿದ್ದಾರೆ ಎಂದರು.
ಇದೇ ವೇಳೆ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ ವಿಚಾರವಾಗಿ ಬಿಬಿಎಂಪಿ ಚುನಾವಣೆ ಮುಗಿದ ಬಳಿಕ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.