ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಡಿಜಿಪಿ ರವೀಂದ್ರನಾಥ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವಧಿ ಪೂರ್ವ ವರ್ಗಾವಣೆ ಹಿನ್ನೆಲೆಯಲ್ಲಿ ಬೇಸರಗೊಂಡು ರಾಜೀನಾಮೆ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಜಿಪಿ ರವೀಂದ್ರನಾಥ್, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ನನ್ನನ್ನು ಅವಧಿ ಪೂರ್ವವೇ ರಾಜ್ಯ ಪೊಲೀಸ್ ತರಬೇತಿಯ ಎಡಿಜಿಪಿಯಾಗಿ ಸರ್ಕಾರ ವರ್ಗಾವಣೆ ಮಾಡಿದೆ. ಅಲ್ಲದೇ ನಕಲಿ ಜಾತಿ ಪ್ರಮಾಣ ಪತ್ರದ ವಿರುದ್ಧ ನಾನು ಹೋರಾಟ ನಡೆಸಿದ್ದೆ. ಹೋರಾಟ ನಡೆಸುತ್ತಿರುವ ನಡುವೆಯೇ ಸರ್ಕಾರ ಏಕಾಏಕಿ ನನ್ನನ್ನು ವರ್ಗಾವಣೆ ಮಾಡಿರುವುದು ಬೇಸರ ತಂದಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರಿಗೆ ನೋಟೀಸ್ ನೀಡಿದ್ದೆ. ಅವರು ವಕೀಲರ ಮೂಲಕ 10 ದಿನ ಕಾಲಾವಕಾಶ ಕೇಳಿದ್ದರು. ಇದರ ಮಧ್ಯೆ ರಾಜ್ಯ ಸರ್ಕಾರ ನನ್ನ ವರ್ಗಾವಣೆ ಮಾಡಿದೆ. ಸಾರ್ವಜನಿಕ ಹಿತಾಸಕ್ತಿಯಿಲ್ಲದೇ ನನಗೆ ಕಿರುಕುಳ ನೀಡುವ ನಿಟ್ಟಿನಲ್ಲಿ ವರ್ಗಾವಣೆ ಮಾಡಿದಂತಿದೆ. ನನ್ನ ವರ್ಗಾವಣೆ ಹಿಂದೆ ಈ ಪ್ರಕರಣದ ಪಾತ್ರ ಇದೆ. ಓರ್ವ ಜವಾಬ್ದಾರಿಯುತ ಅಧಿಕಾರಿಯಾಗಿ ನಾನು ಮಾತನಾಡುತ್ತಿದ್ದೇನೆ. ನನ್ನ ವರ್ಗಾವಣೆ ಬಗ್ಗೆ ಜನರಿಗೆ ತಪ್ಪು ಸಂದೇಶ ರವಾನೆಯಾಗಬಾರದು. ಈ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ.