ಬೆಂಗಳೂರು: ದೇಶ ಸೇರಿದಂತೆ ರಾಜ್ಯದಲ್ಲಿ ಕೊರೊನಾ ಹಾಗೂ ರೂಪಾಂತರಿ ಓಮಿಕ್ರಾನ್ ನ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ 60 ವರ್ಷ ಮೇಲ್ಟಟ್ಟವರಿಗೆ ಬೂಸ್ಟರ್ ಡೋಸ್ ಲಸಿಕೆ ನೀಡಲಾಗುವುದು ಎಂದು ಸರ್ಕಾರ ಹೇಳಿತ್ತು. ಈ ನಿಟ್ಟಿನಲ್ಲಿ ಜ.10 ರಿಂದ ಬೂಸ್ಟರ್ ನೀಡುವ ಕಾರ್ಯ ಆರಂಭವಾಗಲಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಎರಡು ಡೋಸ್ ಲಸಿಕೆ ಪಡೆದಿರುವ ಹಿರಿಯ ನಾಗರಿಕರೊಂದಿಗೆ ಆರೋಗ್ಯ ಸೇವಾ ಸಿಬ್ಬಂದಿ, ವಾರಿಯರ್ಸ್ ಗಳಿಗೆ 3ನೇ ಹಂತದ ಡೋಸ್ ನೀಡಲಾಗುವುದು. ಹಲವು ರೋಗಗಳಿಂದ ಬಳಲುತ್ತಿರುವವರಿಗೂ ವೈದ್ಯರ ಶಿಫಾರಸ್ಸಿನ ಮೇಲೆ ಈ ಲಸಿಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ದೇಶ ಸೇರಿದಂತೆ ರಾಜ್ಯದಲ್ಲಿ ಮೂರನೇ ಅಲೆಯ ಭಯ ಶುರುವಾಗಿದೆ. ಹೀಗಾಗಿ ಜನರು ಹೆಚ್ಚು ಜಾಗೃತಿ ವಹಿಸಬೇಕಿದೆ. ಓಮಿಕ್ರಾನ್ ಲಕ್ಷಣ ಮೂಗಿನಿಂದ ಗಂಟಲದವರೆಗೆ ಮಾತ್ರ ಕಾಣಿಸಿಕೊಳ್ಳುತ್ತದೆ. ಅದು ಶ್ವಾಸಕೋಶದವರೆಗೆ ಹೋಗುವ ಸಾಧ್ಯತೆ ತೀರಾ ಕಡಿಮೆ. ಹೀಗಾಗಿ ಸೋಂಕಿಗೆ ಜನರು ಭಯಭೀತರಾಗಬಾರದು. ಸೋಂಕಿನ ಲಕ್ಷಣಗಳು ಹೆಚ್ಚಾಗಿ ಕಂಡು ಬಂದರೆ, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದ್ದಾರೆ.
ಈಗಾಗಲೇ 3.5 ಲಕ್ಷ 15 ರಿಂದ 18 ವರ್ಷ ವಯಸ್ಸಿನೊಳಗಿದ್ದ ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಮಕ್ಕಳಿಗೆ ನೀಡುವ ಲಸಿಕೆಯ ಗುರಿಯನ್ನು ತಲುಪಲಾಗುವುದು. ಆ ನಂತರ 28 ದಿನಗಳ ಬಳಿಕ ಮಕ್ಕಳಿಗೆ ಎರಡನೇ ಡೋಸ್ ನೀಡಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಮಹಾಮಾರಿ ವೇಗವಾಗಿ ಹಬ್ಬತ್ತಿದೆ. ಇದೇ ಸಂದರ್ಭದಲ್ಲಿ ಹೋರಾಟ ಕೈಗೊಂಡಿರುವ ಕಾಂಗ್ರೆಸ್ ತನ್ನ ನಿಲುವನ್ನು ಬದಲಾಯಿಸಬೇಕು. ಇಲ್ಲವಾದರೆ, ಕಾನೂನಿನ ಮೂಲಕ ಅವರ ಹೋರಾಟಕ್ಕೆ ಉತ್ತರ ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ.