ನವದೆಹಲಿ: ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣಾ ಮತ ಎಣಿಕೆ ಕಾರ್ಯ ಚುರುಕುಗೊಂಡಿದ್ದು, ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ನಿಚ್ಚಳವಾಗಿದೆ.
ಗುಜರಾತ್ ನಲ್ಲಿ 155 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿರುವ ಬಿಜೆಪಿ ಹೊಸ ದಾಖಲೆ ಬರೆದಿದೆ. ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದ್ದು, ಗುಜರಾತ್ ನಲ್ಲಿ ಬಿಜೆಪಿ ಸರ್ಕಾರ ರಚನೆ ಖಚಿತವಾಗಿದೆ.
ಇದೇ ವೇಳೆ ಹಿಮಾಚಲ ಪ್ರದೇಶದಲ್ಲಿಯೂ ಸರ್ಕಾರ ರಚನೆಗೆ ಬಿಜೆಪಿ ಕಸರತ್ತು ನಡೆಸಿದೆ. ನಾಲ್ವರು ಪಕ್ಷೇತರರು ಹಾಗೂ ರೆಬಲ್ಸ್ ಜೊತೆ ಬಿಜೆಪಿ ನಾಯಕರು ಸಂಪರ್ಕದಲ್ಲಿದ್ದು, ಬಿಜೆಪಿ ವೀಕ್ಷಕರು ಅಖಾಡಕ್ಕೆ ಇಳಿದಿದ್ದಾರೆ. ಪಕ್ಷೇತರ್ರಾ ಹಾಗೂ ಕಾಂಗ್ರೆಸ್ ರೆಬಲ್ ಅಭ್ಯರ್ಥಿಗಳ ಮನವೊಲಿಸಿ ಅವರ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚನೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದೆ.
ಸಧ್ಯದ ಮಾಹಿತಿ ಪ್ರಕಾರ ಹಿಮಾಚಲ ಪ್ರದೆಶದಲ್ಲಿ ಬಿಜೆಪಿ 33 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಕಾಂಗ್ರೆಸ್ 33 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇತರೆ ಅಭ್ಯರ್ಥಿಗಳು 4 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ.