ಬೆಂಗಳೂರು: ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ತ್ರಿಸದಸ್ಯ ಪೀಠ ನಾಳೆಗೆ ಮುಂದೂಡಿದೆ.
ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ನ್ಯಾ. ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ಹಿಜಾಬ್ ವಿವಾದ ಕುರಿತ ಅರ್ಜಿ ವಿಚಾರಣೆ ನಡೆದಿದ್ದು, ಇಂದೂ ಕೂಡ ಅರ್ಜಿದಾರರ ಪರ ವಕೀಲರ ವಾದ, 2 ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ನಾಳೆ ಮಧ್ಯಾಹ್ನ 2:30ಕ್ಕೆ ಮುಂದೂಡಿದೆ.
ಸರ್ಕಾರದ ಪರ ವಕೀಲ ಎಜಿ ಪ್ರಭುಲಿಂಗ ನಾವದಗಿ ಅವರು ಇಂದು ವಾದ ಮಂಡನೆಗೆ ತಮಗೆ ಸಮಯಾವಕಾಶ ಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇದೇ ವೇಳೆ ಆಡಳಿತ ಮಂಡಳಿ ಪರ ವಾದ ಮಂಡಿಸುತ್ತಿರುವ ಸಜ್ಜನ್ ಪೂವಯ್ಯ, ಎಜಿ ಪ್ರಭುಲಿಂಗ ನಾವದಗಿ ವಾದ ಮಂಡನೆ ಬಳಿಕ ತಾವು ವಾದ ಮಂಡಿಸುವುದಾಗಿ ಕೋರ್ಟ್ ಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ತ್ರಿಸದಸ್ಯ ಪೀಠ ಹಿಜಾಬ್ ಕುರಿತ ಅರ್ಜಿ ವಿಚಾರಣೆಯನ್ನು 5ನೇ ದಿನವೂ ಮುಂದೂಡಿದೆ.