ಬೆಂಗಳೂರು: ಶಾಲೆಗಳಲ್ಲಿ ಹಿಜಾಬ್ ಧರಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಮಧ್ಯಾಹ್ನದ ಭೋಜನ ವಿರಾಮದ ನಂತರ ಮತ್ತೆ ಆರಂಭವಾಗಿದ್ದು, ಕೇರಳ ಹೈಕೋರ್ಟ್, ಮಲೇಷಿಯಾ ಸುಪ್ರೀಂ ಕೋರ್ಟ್, ರಾಷ್ಟ್ರಗೀತೆ ಕುರಿತ ತೀರ್ಪು ಸೇರಿದಂತೆ ಹಲವು ನ್ಯಾಯಾಲಯಗಳ ತೀರ್ಪುಗಳನ್ನು ಅರ್ಜಿದಾರ ಪರ ವಕೀಲ ದೇವದತ್ ಕಾಮತ್ ಉಲ್ಲೇಖಿಸಿದ್ದಾರೆ.
ಈ ಹಿಂದೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಹಿಜಾಬ್ ನಿರ್ಬಂಧಿಸಿತ್ತು. ಆಗ ಕೇರಳ ಹೈಕೋರ್ಟ್ ನಿರ್ಬಂಧವನ್ನು ಎತ್ತಿಹಿಡಿದಿತ್ತು. ಖಾಸಗಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಹಕ್ಕಿದೆ. ಹೈಕೋರ್ಟ್ ತೀರ್ಪು ಸರ್ಕಾರಕ್ಕೆ ಅನುಕೂಲಕರವಾಗಿಲ್ಲ. ಸರ್ಕಾರ ಹಾಗೂ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ವ್ಯತ್ಯಾಸವಿದೆ ಎಂದು ವಾದ ಮಂಡಿಸಿದ್ದಾರೆ.
ಬಾಂಬೆಯ ಫಾತಿಮಾ ಹುಸೇನ್ ಕೇಸ್ ನ್ನು ಉಲ್ಲೇಖಿಸಿರುವ ವಕೀಲ ದೇವದತ್ ಕಾಮತ್, ಬಾಲಕೀಯರೇ ಓದುವ ಶಾಲೆಗೆ ಹಿಜಾಬ್ ನಿರ್ಬಂಧಿಸಲಾಗಿತ್ತು. ಇದನ್ನು ಫಾತಿಮಾ ಹುಸೇನ್ ಸೈಯ್ಯದ್ ಪ್ರಶ್ನಿಸಿದ್ದರು. ಬಾಲಕೀಯರೇ ಇರುವ ಶಾಲೆಗೆ ಹಿಜಾಬ್ ಅಗತ್ಯವಿಲ್ಲ ಎಂದು ಕೋರ್ಟ್ ತಿಳಿಸಿತ್ತು. ಆದರೆ ಕರ್ನಾಟಕದ ಆದೇಶ ಇದಕ್ಕೆ ತದ್ವಿರುದ್ಧವಾಗಿದೆ. ಎಲ್ಲಾ ಶಾಲೆಗಳಲ್ಲಿ ಹಿಜಾಬ್ ನಿರ್ಬಂಧಿಸಲಾಗಿದೆ ಎಂದರು. ಅಲ್ಲದೇ ಕೇವಲ ಸೀರೆ ಉಡಬಹುದೇ ಎಂಬ ಉಡುಪಿನ ವಿವಾದಕ್ಕೆ ಸಂಬಂಧಪಟ್ಟಂತೆಯೂ ವಾದ ಮಂಡಿಸಿದ ಅವರು, ಧಾರ್ಮಿಕ ವಿಚಾರದ ಬಗ್ಗೆ ಯಾವುದೇ ವಿಶ್ಲೇಷಣೆ ಸರಿಯಲ್ಲ, ಸರ್ಕಾರದ ಸಮವಸ್ತ್ರ ಆದೇಶ ಸಮರ್ಪಕವಾಗಿಲ್ಲ ಎಂದು ಹೇಳಿದ್ದಾರೆ.
ಸ್ಕ್ರ್ಯಾಚ್ ನಿಂದ ಸೂಪರ್ ಕಾರ್..! ಮನೆಯಲ್ಲಿಯೇ ಬುಗಾಟಿ ಚಿರಾನ್ ತಯಾರಿಸಿದ ಯೂಟ್ಯೂಬರ್…!
ಕೇಸರಿ ಶಾಲು, ಹಿಜಾಬ್ ವಿವಾದಕ್ಕೆ ಸಂಬಂಧಪಟ್ಟಂತೆ ಮಲೇಷಿಯಾ ಕೋರ್ಟ್ ತೀರ್ಪು ಉಲ್ಲೇಖಿಸಿದ ಅರ್ಜಿದಾರರು ಮಲೇಷಿಯಾ ಸುಪ್ರೀಂ ಕೋರ್ಟ್ ಹಿಜಾಬ್ ಪರವಾಗಿ ತೀರ್ಪು ನೀಡಿದೆ ಎಂದು ಉಲ್ಲೇಖಿಸಿದ್ದಾರೆ. ರಾಷ್ಟ್ರಗೀತೆ ಸಂಬಂಧ ಚಿನ್ನಪ್ಪ ರೆಡ್ಡಿಯವರ ತೀರ್ಪು ಉಲ್ಲೇಖ ಮಾಡಿದ ಅರ್ಜಿದಾರರು, ರಾಷ್ಟ್ರಗೀತೆ ಓದುವಾಗ ಸುಮ್ಮನೆ ನಿಂತುಕೊಂಡಿದ್ದ 3 ಬಾಲಕರ ಪರ ಕೂಡ ಕೋರ್ಟ್ ತೀರ್ಪು ನೀಡಿತ್ತು. ರಾಷ್ಟ್ರಗೀತೆ ಹಾಡುವಾಗ ಎದ್ದು ನಿಂತಿದ್ದೂ ಗೌರವ ಸೂಚಕ, ಹೀಗಿರುವಾಗ ರಾಷ್ಟ್ರಗೀತೆ ಹಾಡದಿರುವುದು ರಾಷ್ಟ್ರಗೀತೆಗೆ ಅಗೌರವವಲ್ಲ ಎಂದು ತೀರ್ಪು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈ ವೇಳೆ ಮಾತನಾಡಿದ ನ್ಯಾ.ಕೃಷ್ಣ ಎಸ್ ದೀಕ್ಷಿತ್, ಸಿಖ್ಖರಿಗೆ ಪಂಚಕಗಳನ್ನು ಕಡ್ಡಾಯ ಮಾಡಲಾಗಿದೆ. ಗುರು ಗ್ರಂಥ ಸಾಹೇಬ್ ನಲ್ಲಿ ಕೇಶ್, ಕಂಗನ್, ಖಡಾ, ಕಚ್ಚಾ, ಕೃಪಾನ್ ಕಡ್ಡಾಯ. ಇದು ಸಿಖ್ಖರ ಅಗತ್ಯ ಧಾರ್ಮಿಕ ಆಚರಣೆ. ಅದೇ ರೀತಿ ಹಿಜಾಬ್ ಕೂಡ ಅಗತ್ಯ ಧಾರ್ಮಿಕ ಆಚರಣೆಯೇ ? ಎಂದು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿದ ವಕೀಲ ದೇವದತ್ ಕಾಮತ್, ಹಿಜಾಬ್ ಕೂಡ ಅತ್ಯಗತ್ಯ ಧಾರ್ಮಿಕ ಆಚರಣೆ. ಸಾರ್ವಜನಿಕ ಸುವ್ಯವಸ್ಥೆಯ ನೆಪದಲ್ಲಿ ಧಾರ್ಮಿಕ ಆಚರಣೆಗೆ ಅಡ್ಡಿ ಮಾಡಲಾಗುತ್ತಿದೆ. ಹಿಜಾಬ್ ಧರಿಸಿ ಹೋದರೆ ಯಾರಿಗೂ ತೊಂದರೆಯಿಲ್ಲ, ಅವಕಾಶ ನೀಡಬೇಕು ಎಂದು ವಾದ ಮಂಡಿಸಿದ್ದಾರೆ.
ಇದಕ್ಕೆ ಲಘುದಾಟಿಯಲ್ಲಿ ಪ್ರತಿಕ್ರಿಯಿಸಿದ ಹೈಕೋರ್ಟ್ ನ್ಯಾ.ಕೃಷ್ಣ ದೀಕ್ಷಿತ್, ಹಂದಿಮರಿಯೊಂದಿಗೆ ಮಾರುಕಟ್ಟೆಗೆ ಹೋದರೆ ಸಮಸ್ಯೆ ಇಲ್ಲ. ಹೆಚ್ಚೆಂದರೆ ಕೆಲವರು ನಗಬಹುದು. ಆದರೆ ದೇವಾಲಯ, ಚರ್ಚ್, ಮಸೀದಿಗೆ ಕೊಂಡೊಯ್ದರೆ ಸಮಸ್ಯೆ ಎಂದು ಹೇಳಿದ್ದಾರೆ.