ಬೆಂಗಳೂರು: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತ್ರಿಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ಆರಂಭವಾಗಿದ್ದು, ಇಂದು ಸರ್ಕಾರದ ಪರ ಪ್ರತಿವಾದ ಮಂಡನೆಯಾಗಲಿದೆ.
ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ಆರಂಭವಾಗಿದ್ದು, ಇಂದು ಸರ್ಕಾರದ ಪರ ಎಜಿ ಪ್ರಭುಲಿಂಗ ನಾವದಗಿ ಪ್ರಮುಖವಾಗಿ ವಾದ ಮಂಡಿಸಲಿದ್ದಾರೆ.
ಹಿಜಾಬ್ ವಿವಾದ ಕುರುತು ಇನ್ನೂ ಮೂರು ಹೊಸ ರಿಟ್ ಅರ್ಜಿಗಳು ಸಲ್ಲಿಕೆಯಾಗಿವೆ. ಹೊಸ ಅರ್ಜಿಯಲ್ಲಿ ಹತ್ತು ನಿಮಿಷ ಮಾತ್ರ ವಾದ ಮಂಡನೆಗೆ ಸಮಯ ನೀಡಲಾಗುವುದು ಎಂದು ಸಿಜೆ ತಿಳಿಸಿದ್ದಾರೆ.
ದುಪ್ಪಟ್ಟಾ ಹಾಗೂ ಹಿಜಾಬ್ ಗಳನ್ನು ಬಳಸಲು ಅನುಮತಿ ಕೊಡಬೇಕು ಎಂದು ಹಿರಿಯ ವಕೀಲ ರವಿವರ್ಮ ಕುಮಾರ್ ಮನವಿ ಮಾಡಿದ್ದಾರೆ. ಅಲ್ಲದೇ ಕೋರ್ಟ್ ನಲ್ಲಿನ ವಾದ-ಪ್ರತಿವಾದ ಕುರಿತಾಗಿ ಯೂಟ್ಯೂಬ್ ಲೈವ್ ಬರುತ್ತಿದ್ದು, ಯೂಟ್ಯೂಬ್ ಲೈವ್ ನಿಂದ ರಾಜ್ಯಾದ್ಯಂತ ಸಮಸ್ಯೆ ಆಗುತ್ತಿದೆ. ಹೀಗಾಗಿ ಲೈವ್ ಟೆಲಿಕಾಸ್ಟ್ ತಾತ್ಕಾಲಿಕ ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಿಜೆ, ಅರ್ಜಿದಾರರ ಪರ ವಾದ ಮಂಡನೆಯನ್ನು ಯೂಟ್ಯೂಬ್ ಲೈವ್ ನಲ್ಲಿ ರಾಜ್ಯದ ಜನತೆ ವೀಕ್ಷಿಸಿದ್ದಾರೆ. ಪ್ರತಿವಾದ ಮಂಡನೆ ಕೂಡ ಜನರು ವೀಕ್ಷಿಸಲಿ ಇದರಿಂದ ಸಮಸ್ಯೆಯಿಲ್ಲ ಎಂದು ಹೇಳಿದ್ದಾರೆ.
ಒಟ್ಟಾರೆ ಹಿಜಾಬ್ ಕುರಿತ ಅರ್ಜಿ ವಿಚಾರಣೆ ಹೈಕೋರ್ಟ್ ತ್ರಿಸದಸ್ಯ ಪೀಠದಲ್ಲಿ ಆರಂಭವಾಗಿದ್ದು, ಇಡೀ ರಾಜ್ಯದ ಚಿತ್ತ ಹೈಕೋರ್ಟ್ ತೀರ್ಪಿನತ್ತ ನೆಟ್ಟಿದೆ.