ಬೆಂಗಳೂರು: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಬೆನ್ನಲ್ಲೇ ಹೈಕೋರ್ಟ್ ತ್ರಿಸದಸ್ಯ ಪೀಠ ಮಧ್ಯಂತರ ಆದೇಶ ಹೊರಡಿಸಿದ್ದ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಅಲ್ಪಸಂಖ್ಯಾತ ಹಜ್, ವಕ್ಫ್ ಇಲಾಖೆ ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ.
ಅಲ್ಪಸಂಖ್ಯಾತ ಇಲಾಖೆ ಅಡಿ ಬರುವ ಯಾವುದೇ ವಸತಿ ಶಾಲೆ, ಮೌಲಾನಾ ಆಜಾದ್ ಮಾದರಿ ಶಾಲೆ ಸೇರಿದಂತೆ ಯಾವುದೇ ಶಾಲೆ-ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು, ಸ್ಕಾರ್ಪ್ ಗಳನ್ನು ಧರಿಸುವಂತಿಲ್ಲ ಎಂದು ಆದೇಶ ಹೊರಡಿಸಿದೆ.
ಶಾಲೆ ಹಾಗೂ ತರಗತಿಗಳಲ್ಲಿ ಯಾವುದೇ ಧಾರ್ಮಿಕ ಬಾವುಟ, ಧಾರ್ಮಿಕ ಚಿಹ್ನೆಗಳನ್ನು ಕೂಡ ಬಳಕೆ ಮಾಡುವಂತಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಿದೆ.
ಮುಂದಿನ ಆದೇಶದವರೆಗೂ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಯಾವುದೇ ಧಾರ್ಮಿಕ ಗುರುತು ಧರಿಸಿ ಹೋಗುವಂತಿಲ್ಲ, ಸಮವಸ್ತ್ರ ಕಡ್ಡಾಯ ಎಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿತ್ತು. ಕೋರ್ಟ್ ಆದೇಶದ ಹೊರತಾಗಿಯೂ ರಾಜ್ಯದ ಹಲವು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಹೋಗುತ್ತಿರುವುದಲ್ಲದೇ ಹಲವೆಡೆ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಕೂಡ ಹೈಕೋರ್ಟ್ ಮಧ್ಯಂತರ ಆದೇಶದಂತೆಯೇ ಸುತ್ತೋಲೆ ಹೊರಡಿಸಿರುವುದು ಮಹತ್ವ ಪಡೆದುಕೊಂಡಿದೆ.