ನವದೆಹಲಿ: ರಾಜ್ಯದಲ್ಲಿನ ಹಿಜಾಬ್ ವಿವಾದ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಆದರೆ ಈ ಕುರಿತು ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಹಿರಿಯ ವಕೀಲ ಕಪಿಲ್ ಸಿಬಲ್, ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಹಿಜಾಬ್ ವಿವಾದ ಕುರಿತು ಮಧ್ಯಪ್ರವೇಶ ಮಾಡಿ, ತ್ವರಿತ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದಾರೆ.
ಹಿಜಾಬ್ ವಿಚಾರವಾಗಿ ಮಧ್ಯಪ್ರವೇಶಕ್ಕೆ ನಿರಾಕರಿಸಿರುವ ಸುಪ್ರೀಂ ಕೋರ್ಟ್, ಮೊದಲು ಕರ್ನಾಟಕ ಹೈಕೋರ್ಟ್ ತೀರ್ಪು ಬರಲಿ. ಈ ಬಗ್ಗೆ ನಾವು ಕೂಡ ಗಮನ ಹರಿಸುತ್ತೇವೆ. ಅಲ್ಲಿಯವರೆಗೂ ಕಾಯುವಂತೆ ಕಪಿಲ್ ಸಿಬಲ್ ಅವರಿಗೆ ಸೂಚಿಸಿದೆ.
ಆದರೆ ಹೈಕೋರ್ಟ್ ಅರ್ಜಿಯ ಕುರಿತಾಗಿ ಯಾವುದೇ ಆದೇಶ ನೀಡದೇ ಇರಬಹುದು. ಹಿಜಾಬ್ ಪ್ರಕರಣವನ್ನು ವಿಚಾರಣಾ ಪಟ್ಟಿಗೆ ಸೇರಿಸಿ ಎಂದು ಸಿಬಲ್, ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್ ಕನಿಷ್ಠ ಒಂದು ದಿನವಾದರೂ ಕಾಯಿರಿ ಎಂದು ತಿಳಿಸಿದೆ.