ಮಂಗಳೂರು: ಕಡಲನಗರಿ ಮಂಗಳೂರಿನಲ್ಲಿ ಹಿಜಾಬ್ ವಿವಾದ ಬೂದಿ ಮುಚ್ಚಿದ ಕೆಂಡದಂತಿರುವಾಗಲೇ ಮುಸ್ಲಿಂ ಸಮುದಾಯಗಳು ಪಿಯು ಕಾಲೇಜು ಸ್ಥಾಪನೆಗೆ ಮುಂದಾಗಿವೆ.
ಹೈಕೋರ್ಟ್ ತೀರ್ಪಿನಂತೆ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಸೇರಿದಂತೆ ಯಾವುದೇ ಧಾರ್ಮಿಕ ಚಿಹ್ನೆ ಬಳಸಲು ಅವಕಾಶವಿಲ್ಲ. ಹಾಗಾಗಿ ಶಾಲಾ-ಕಾಲೇಜು ಆಡಳಿತ ಮಂಡಳಿ ಹಿಜಾಬ್ ಧರಿಸಿ ತರಗತಿಗೆ ಬರಲು ಅವಕಾಶ ನೀಡುತ್ತಿಲ್ಲ. ಇದರ ಬೆನ್ನಲ್ಲೇ ದಕ್ಷಿಣ ಕನ್ನಡದಲ್ಲಿ 13 ಮುಸ್ಲಿಂ ಆಡಳಿತಗಳಿಂದ ಪಿಯು ಕಾಲೇಜು ಸ್ಥಾಪನೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿದೆ.
ಕಾಲೇಜು ಸ್ಥಾಪಿಸಲು ಅನುಮತಿ ಕೋರಿ ಪಿಯು ಬೋರ್ಡ್ ಗೆ ಸುಮಾರು 24 ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳ ಪೈಕಿ 13 ಅರ್ಜಿಗಳು ಮುಸ್ಲಿಂ ಶಿಕ್ಷಣ ಸಂಸ್ಥೆಗಳದ್ದು. 14ರಲ್ಲಿ ಎರಡು ಅರ್ಜಿಗಳಿಗೆ ಅನುಮತಿ ನೀಡಲಾಗಿದ್ದು, ಗುರುಪುರದ ಮುಸ್ಲಿಂ ಶಿಕ್ಷಣ ಸಂಸ್ಥೆ ಹಾಗೂ ಸುಬ್ರಹ್ಮಣ್ಯದ ಮುಸ್ಲಿಮೇತರ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ ಎಂದು ತಿಳಿದುಬಂದಿದೆ.