ನವದೆಹಲಿ: ಹಿಜಾಬ್ ವಿವಾದ ಕುರಿತು ಕರ್ನಾಟಕ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಅರ್ಜಿ ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯ ಈ ವಿಷಯವನ್ನು ದೊಡ್ಡದು ಮಾಡದಂತೆ ತಿಳಿಸಿದೆ.
ಹೈಕೋರ್ಟ್ ಸಿಜೆ ರಿತುರಾಜ್ ಅವಸ್ತಿ ನೇತೃತ್ವದ ತ್ರಿಸದಸ್ಯ ಪೀಠ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಮುಂದಿನ ಆದೇಶದವರೆಗೂ ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಗುರುತು ಬಳಸುವಂತಿಲ್ಲ, ಸಮವಸ್ತ್ರ ಕಡ್ಡಾಯ ಎಂದು ಮಧ್ಯಂತರ ಆದೇಶ ನೀಡಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ ಹಿರಿಯ ವಕೀಲ ದೇವದತ್ ಕಾಮತ್, ಮಧ್ಯಂತರ ಆದೇಶಕ್ಕೆ ತಡೆ ನೀಡಿ, ತ್ವರಿತ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದಾರೆ.
ವಿದ್ಯಾರ್ಥಿಗಳಿಗೆ ಧಾರ್ಮಿಕ ಗುರುತು ಧರಿಸದಂತೆ ಹೈಕೋರ್ಟ್ ನೀಡಿರುವ ಆದೇಶ ಧಾರ್ಮಿಕ ನಂಬಿಕೆ ಮೇಲೆ ದೂರಗಾಮಿ ಪರಿಣಾಮ ಬೀರಬಹುದು. ಸಂವಿಧಾನದ 25ನೇ ವಿಧಿಯಡಿ ನೀಡುವ ಹಕ್ಕು ಸಿಗಲ್ಲ ಎಂದು ವಾದ ಮಂಡಿಸಿದ್ದಾರೆ.
ದೇವದತ್ತ್ ಕಾಮತ್ ವಾದ ಆಲಿಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ಪೂರ್ಣಪೀಠ ತೀರ್ಪು ನೀಡುವವರೆಗೂ ಕಾಯಬೇಕು, ಈ ಬಗ್ಗೆ ತ್ವರಿತ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಹೈಕೋರ್ಟ್ ವಿಚಾರಣೆಯನ್ನು ನಾವೂ ಕೂಡ ಗಮನಿಸುತ್ತೇವೆ. ಯಾವುದಾದರೂ ಪರೀಕ್ಷೆಗಳಿಗೆ ತೊಂದರೆಯಾಗುವುದಿದ್ದರೆ ಮಾತ್ರ ಸೂಕ್ತ ಸಮಯದಲ್ಲಿ ವಿಚಾರಣೆ ನಡೆಸುತ್ತೇವೆ ಎಂದು ಹೇಳಿದೆ.
ಅಲ್ಲದೇ ಹಿಜಾಬ್ ವಿವಾದ ದೊಡ್ಡ ವಿಷಯ ಮಾಡಬಾರದು. ಕೇಂದ್ರ ಸರ್ಕಾರ ಕೂಡ ಈ ಬಗ್ಗೆ ಆಲೋಚನೆ ಮಾಡಲಿ. ಪ್ರಸ್ತುತ ಕರ್ನಾಟಕ ಹೈಕೋರ್ಟ್ ನಡೆಸುವ ವಿಚಾರಣೆಯನ್ನು ಗಮನಿಸಲಾಗುವುದು. ತೀರ್ಪು ಬರುವವರೆಗೂ ತಾಳ್ಮೆಯಿರಲಿ ಎಂದು ತಿಳಿಸಿದೆ.