ಬೆಂಗಳೂರು: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಗೆ ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ತ್ರಿಸದಸ್ಯ ಪೀಠ ಮತ್ತೆ ಮುಂದೂಡಿದ್ದು, ಈ ಮೂಲಕ ಸತತ 8ನೇ ದಿನವೂ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ.
ಸಿಜೆ ರಿತುರಾಜ್ ಅವಸ್ತಿ, ನ್ಯಾ.ಕೃಷ್ಣ ದೀಕ್ಷಿತ್ ಹಾಗೂ ನ್ಯಾ.ಖಾಜಿ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ಹಿಜಾಬ್ ಅರ್ಜಿ ವಿಚಾರಣೆ ನಡೆಯುತ್ತಿದ್ದು, ಇಂದು ಮೂರು ಗಂಟೆಗಳ ಕಾಲ ಸುದೀರ್ಘ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ನಾಳೆ ಮಧ್ಯಾಹ್ನ 2:30ಕ್ಕೆ ಅರ್ಜಿ ವಿಚಾರಣೆ ಮುಂದೂಡಿದೆ.
ಇಂದು ಸರ್ಕಾರದ ಪರ ವಕೀಲ ಪ್ರಭುಲಿಂಗ ನಾವದಗಿ ವಾದ ಮಂಡಿಸಿದ್ದು, ಅವರ ವಾದ ಮಂಡನೆ ಮುಕ್ತಾಯವಾದ ಬಳಿಕ ಉಡುಪಿ ಕಾಲೇಜು ಪರ ವಕೀಲ ವೆಂಕಟರಮಣ ವಾದ ಮಂಡಿಸಿದರು. ಸುದೀರ್ಘ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಹಿಜಾಬ್ ವಿವಾದ ಕುರಿತು ಹೆಚ್ಚು ದಿನ ವಿಚಾರಣೆ ಮುಂದುವರೆಸಲು ಸಾಧ್ಯವಿಲ್ಲ, ಶೀಘ್ರವಾಗಿ ಅರ್ಜಿ ವಿಚಾರಣೆ ಮುಗಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ ಎಂದು ತಿಳಿದುಬಂದಿದೆ.