ಬೆಂಗಳೂರು: ಹಿಜಾಬ್ ಧರಿಸಲು ಅವಕಾಶ ಕೋರಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ಹೈಕೋರ್ಟ್ ಪೂರ್ಣಪೀಠದಲ್ಲಿ ಮುಂದುವರೆದಿದ್ದು, ಸರ್ಕಾರ ಪರಿಸ್ಥಿತಿ ಅರ್ಥಮಾಡಿಕೊಂಡು ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಮಧ್ಯಂತರ ಅರ್ಜಿದಾರ ಕಾಳೀಶ್ವರಮ್ ರಾಜ್ ವಾದ ಮಂಡಿಸಿದ್ದಾರೆ.
ಕೃಪಾಣ್ ಧರಿಸಲು ಸಿಖ್ಖರಿಗೆ ಅವಕಾಶ ನೀಡಲಾಗಿದೆ. ಅದೇ ರೀತಿ ಹಿಜಾಬ್ ನೊಂದಿಗೆ ವಿದ್ಯಾರ್ಥಿನಿಯರು ಶಾಲಾ-ಕಾಲೇಜಿಗೆ ಬರಲು ಅವಕಾಶ ನೀಡಬೇಕು ಎಂದಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಇಚ್ಛಾನುಸಾರ ಬಟ್ಟೆ ತೊಡುವ ಹಕ್ಕಿದೆ. ಸಮವಸ್ತ್ರ ಧರಿಸದಿದ್ದರೆ ದಂಡ ವಿಧಿಸಲು ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿ ಅವಕಾಶವಿಲ್ಲ. ಬಟ್ಟೆ ಧರಿಸುವುದು ಸಂವಿಧಾನದ 19(1)ಎ ಅಡಿ ಬರುತ್ತದೆ. ದಿವ್ಯಾ ಯಾದವ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿರ್ಧರಿಸಿದೆ ಎಂದು ವಾದ ಮಂಡಿಸಿದ ಸಂಜಯ್ ಹೆಗ್ಡೆ, ಸರ್ಕಾರ ಧಾರ್ಮಿಕ ಸ್ವಾತಂತ್ರ್ಯವನ್ನು ಕೆಲವೊಮ್ಮೆ ಮಾತ್ರ ನಿರ್ಬಂಧಿಸಬಹುದು. ಸಾರ್ವಜನಿಕ ಸುವ್ಯವಸ್ಥೆ, ಆರೋಗ್ಯ, ನೈತಿಕತೆ ದೃಷ್ಟಿಯಿಂದ ನಿರ್ಬಂಧಿಸಬಹುದು ಎಂದು ಅಮೆರಿಕಾ ಕೋರ್ಟ್ ತೀರ್ಪನ್ನು ಕೂಡ ಉಲ್ಲೇಖಿಸಿದರು.
ಕೇರಳ ಹೈಕೋರ್ಟ್ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ವಿದ್ಯಾರ್ಥಿಗಳು ವರ್ಷಗಳಿಂದ ಹಿಜಾಬ್ ಧರಿಸಿ ಕಾಲೇಜಿಗೆ ಹೋಗುತ್ತಿದ್ದಾರೆ. ಫೆಬ್ರವರಿ 3ರಿಂದ ಮಾತ್ರ ಹಿಜಾಬ್ ಗೆ ನಿರ್ಬಂಧ ವಿಧಿಸಲಾಗಿದ್ದು, ಸರ್ಕಾರದ ಸಮವಸ್ತ್ರ ಆದೇಶ ವಿವೇಚನಾರಹಿತವಾಗಿದೆ. ಸರ್ಕಾರಿ ಆದೇಶದ ಎರಡನೇ ಪೇಜನ್ನು ತಾವು ಓದಬೇಕು, ಸುಪ್ರೀಂ ಕೋರ್ಟ್, ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಲಾಗಿದೆ. ಹಿಜಾಬ್ ಧರಿಸುವುದು ಸಂವಿಧಾನದ 25(1)ರಡಿ ಹಕ್ಕಲ್ಲ ಎಂದಿದ್ದಾರೆ. ಸರ್ಕಾರ ಉಲೇಖಿಸಿರುವ ಮೂರು ತೀರ್ಪುಗಳು ಅದರ ವಿರುದ್ಧವಿದೆ ಎಂದು ದೇವದತ್ ಕಾಮತ್ ವಾದ ಮಂಡಿಸಿದ್ದಾರೆ.