ನವದೆಹಲಿ: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪನ್ನು ಎಲ್ಲರೂ ಪಾಲಿಸಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ದೇವೇಗೌಡರು, ಹಿಜಾಬ್ ಬಗ್ಗೆ ಹೈಕೋರ್ಟ್ ನೀಡಿರುವ ತೀರ್ಪಿಗೆ ಎಲ್ಲರೂ ತಲೆಬಾಗಬೇಕು. ಹಿಜಾಬ್ ವಿಚಾರ ನಿಭಾಯಿಸುವಲ್ಲಿ ಸರ್ಕಾರ ಆರಂಭದಲ್ಲೇ ವಿಫಲವಾಗಿದೆ. ತೀರ್ಪಿನಲ್ಲಿ ರಾಜಕೀಯ ಲಾಭದ ಯೋಚನೆ ಬೇಡ. ವೈಯಕ್ತಿಕತೆಗಿಂತ ಎಲ್ಲರೂ ತೀರ್ಪು ಒಪ್ಪುವುದು ಸೂಕ್ತ ಎಂದರು.
ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಹೋಗುವುದಾದರೆ ಅವರ ವೈಯಕ್ತಿಕ ಅಭಿಪ್ರಾಯ. ಮುಖ್ಯವಾಗಿ ಹೆಣ್ಣು ಮಕ್ಕಳು ಶಿಕ್ಷಣದ ಕುರಿತಾಗಿ ಯೋಚಿಸಬೇಕು. ವಿದ್ಯಾಭ್ಯಾಸದ ಬಗ್ಗೆ ಗಮನ ಕೊಡುವುದು ಉತ್ತಮ ಎಂದು ಹೇಳಿದರು.
ನಾವೆಲ್ಲರೂ ಅಣ್ಣ-ತಮ್ಮಂದಿರಂತೆ ಶಾಂತಿಯಿಂದ ಇರೋಣ. ಇಂತಹ ವಿಚಾರಕ್ಕೆ ರಾಜಕೀಯ ಲಾಭ ಪಡೆದ ನಿದರ್ಶನ ಇದೆ. ಎರಡೂ ಪಕ್ಷಗಳು ರಾಜಕೀಯ ಲಾಭ ಪಡೆಯಲು ಯತ್ನಿಸಿವೆ. ಆರಂಭದಿಂದಲೂ ನಮ್ಮ ನಿಲುವು ಇದೇ ಆಗಿದೆ ಎಂದರು.