ಉಡುಪಿ: ಉಡುಪಿ, ಕುಂದಾಪುರ ಕಾಲೇಜುಗಳಲ್ಲಿ ಮತ್ತೆ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಮುಂದುವರೆದಿದ್ದು, ಇಂದು ಕೂಡ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದು, ಕುಂದಾಪುರ ಸರ್ಕಾರಿ ಪಿಯು ಕಾಲೇಜು ಎದುರು ಹೈಡ್ರಾಮಾ ನಡೆದಿದೆ.
ಹಿಜಾಬ್ ಹಾಗೂ ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ್ದ ಕಾಲೇಜು ವಿದ್ಯಾರ್ಥಿಗಳನ್ನು ನಿನ್ನೆಯಷ್ಟೇ ಪ್ರಾಂಶುಪಾಲರು ವಾಪಸ್ ಕಳುಹಿಸಿದ್ದರು. ಇದರ ಬೆನ್ನಲ್ಲೇ ಕುಂದಾಪುರ ಪದವಿ ಪೂರ್ವ ಕಾಲೇಜಿನ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇಂದು ಮತ್ತೆ ಹಿಜಾಬ್ ಧರಿಸಿ ಪೋಷಕರೊಂದಿಗೆ ಆಗಮಿಸಿದ್ದಾರೆ.
ಕಾಲೇಜಿಗೆ ಬಂದ ವಿದ್ಯಾರ್ಥಿನಿಯರನ್ನು ಕಾಲೇಜು ಗೇಟ್ ಬಳಿಯೇ ತಡೆಯಲಾಗಿದ್ದು, ಹಿಜಾಬ್ ತೆಗೆದು ತರಗತಿಗೆ ಬರುವಂತೆ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ. ಆದರೆ ಒಪ್ಪದ ವಿದ್ಯಾರ್ಥಿಗಳು ಹಿಜಾಬ್ ನಮ್ಮ ಹಕ್ಕು. ಇಷ್ಟು ವರ್ಷ ಇಲ್ಲದ ನಿಯಮ ಈಗ ಯಾಕೆ? ನಾವು ಎಂದಿನಂತೆ ಹಿಜಾಬ್ ಧರಿಸಿ ಬಂದಿದ್ದೇವೆ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ಎಂದು ವಾಗ್ವಾದಕ್ಕಿಳಿದಿದ್ದಾರೆ.
Shocking News: ಕೊರೊನಾ ಸಾವಿನ ಸಂಖ್ಯೆಯಲ್ಲಿ ಭಾರತಕ್ಕೆ 3 ನೇ ಸ್ಥಾನ – ಐದು ಲಕ್ಷ ದಾಟಿದ ಮೃತರ ಸಂಖ್ಯೆ
ಕಾಲೇಜು ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ವಿದ್ಯಾರ್ಥಿಗಳ ಮನವೊಲಿಸಲು ಯತ್ನಿಸಿದ್ದಾರೆ. ಆದರೂ ವಿದ್ಯಾರ್ಥಿಗಳು ಒಪ್ಪದಿದ್ದಾಗ ಕಾಲೇಜು ಸಿಬ್ಬಂದಿಗಳು ಕಾಲೇಜು ಗೇಟ್ ಮುಚ್ಚಿ ಕ್ರಮ ಕೈಗೊಂಡಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾಲೇಜು ಮೈದಾನದಲ್ಲಿ ಧರಣಿ ನಡೆಸಿದ್ದಾರೆ. ಪ್ರತಿಭಟನೆ ನಡೆಸಿದರೆ ಎಫ್ ಐ ಆರ್ ದಾಖಲಿಸುವುದಾಗಿ ಕುಂದಾಪುರ ಸರ್ಕಲ್ ಇನ್ಸ್ ಪೆಕ್ಟರ್ ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆ ಕುಂದಾಪುರ, ಉಡುಪಿ ಭಾಗದಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ಸಂಘರ್ಷ ಮತ್ತೆ ತಾರಕಕ್ಕೇರಿದ್ದು, ವಿದ್ಯಾರ್ಥಿಗಳು ಪಾಠ ಬಿಟ್ಟು ಧರ್ಮ ಸಂಘರ್ಷದಲ್ಲಿ ತೊಡಗಿರುವುದು ವಿಪರ್ಯಾಸ.