ಬೆಂಗಳೂರು: ಹಿಜಾಬ್ ವಿವಾದ ಕುರಿತು ಹೈಕೋರ್ಟ್ ತ್ರಿಸದಸ್ಯ ಪೀಠ ಮಹತ್ವದ ತೀರ್ಪು ಪ್ರಕಟಿಸಿದ್ದು, ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ, ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ನೀತಿ ಕುರಿತು ಸರ್ಕಾರದ ಆದೇಶ ಕಾನೂನು ಬದ್ಧ ಎಂದು ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಾರ್ಯಕರ್ತರಿಗೆ ವಿಶೇಷ ಮನವಿ ಮಾಡಿದ್ದಾರೆ.
ಹಿಜಾಬ್ ಕುರಿತು ಹೈಕೋರ್ಟ್ ನೀಡಿರುವ ತೀರ್ಪನ್ನು ಎಲ್ಲಾ ಕಾರ್ಯಕರ್ತರು ಸಮಚಿತ್ತದಿಂದ ಸ್ವೀಕರಿಸಬೇಕು. ಯಾವುದೇ ಅನಗತ್ಯ ಗೊಂದಲಗಳಿಗೆ ಅವಕಾಶ ಮಾಡಿಕೊಡಬಾರದು. ವಿಜಯೋತ್ಸವ, ಮೆರವಣಿಗೆ, ಸಂಭ್ರಮಾಚರಣೆ ಮಾಡಬಾರದು ಎಂದು ಸೂಚಿಸಿದ್ದಾರೆ.
ಈ ಕುರಿತು ರಾಜ್ಯ ಬಿಜೆಪಿ ಘಟಕ ದಿಂದಲೂ ಟ್ವೀಟ್ ಮಾಡಲಾಗಿದ್ದು, ಹಿಜಾಬ್ ತೀರ್ಪು ಕುರಿತು ಯಾವುದೇ ಪ್ರತಿಭಟನೆ, ಪ್ರತಿಕ್ರಿಯಾತ್ಮಕ ಪತ್ರಿಕಾ ಹೇಳಿಕೆ ನೀಡಬಾರದು. ವಿಜಯೋತ್ಸವ, ಮೆರವಣಿಗೆ, ಸಂಭ್ರಮಾಚರಣೆ ಮಾಡುವಂತಿಲ್ಲ. ಕೋರ್ಟ್ ಆದೇಶ ಶಾಂತವಾಗಿ ಪಾಲಿಸಬೇಕು ಎಂದು ತಿಳಿಸಿದೆ.