ಮಂಗಳೂರು: ಮಂಗಳೂರಿನ ಕೆಲ ಕಾಲೇಜುಗಳಲ್ಲಿ ಹಿಜಾಬ್ ವಿವಾದ ಮುಂದುವರೆದಿದ್ದು, ಕಾಲೇಜು ಆಡಳಿತ ಮಂಡಳಿ ಸೂಚನೆ ಹೊರತಾಗಿಯೂ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಗೆ ಪಟ್ಟು ಹಿಡಿದ್ದಾರೆ. ಈ ವಿದ್ಯಾರ್ಥಿನಿಯರಿಗೆ ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಖಡಕ್ ಸಲಹೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯು.ಟಿ. ಖಾದರ್, ಹಿಜಾಬ್ ಗಾಗಿ ಹಠ ಹಿಡಿಯುತ್ತಿರುವವರು, ಕಾನೂನಿನ ವಿರುದ್ಧವಾಗಿ ಮಾತನಾಡುವವರು ಒಮ್ಮೆ ವಿಚಾರ ಮಾಡಬೇಕು. ಒಂದು ಸಲ ವಿದೇಶಕ್ಕೆ ಹೋಗಿ ನೋಡಿ. ಪಾಕಿಸ್ತಾನ, ಸೌದಿಯಂತಹ ದೇಶಕ್ಕೆ ಒಮ್ಮೆ ಹೋಗಿ ನೋಡಲಿ, ಆಗ ನಮ್ಮ ದೇಶದ ಮಹತ್ವ ಗೊತ್ತಾಗುತ್ತದೆ ಎಂದು ಹೇಳಿದರು.
ಇಲ್ಲಿ ಬೇಕಾದ ಹಾಗೆ ಮಾತನಾಡುವುದು, ಜಿಲ್ಲಾಧಿಕಾರಿಗಳನ್ನು ಭೇಟಿಯಾಗುವುದು. ಸುದ್ದಿಗೋಷ್ಠಿ ನಡೆಸೋದು ಮಾಡುವವರು ಒಮ್ಮೆ ವಿದೇಶಕ್ಕೆ ಹೋಗಿ ನೋಡಲಿ ಇಲ್ಲಿ ಹುಲಿ ತರಹ ಇದ್ದವರು ಅಲ್ಲಿ ಬೆಕ್ಕಿನ ತರಹ ಆಗುತ್ತಾರೆ. ಆಗ ನಮ್ಮ ದೇಶ ನೀಡಿದ ಕಾನೂನಿನ ಅವಕಾಶದ ಮಹತ್ವ ಗೊತ್ತಾಗುತ್ತದೆ. ಇಲ್ಲಿ ಸಿಗುವ ಸ್ವಾತಂತ್ರ್ಯದ ಅರಿವಾಗುತ್ತದೆ ಎಂದು ಹೇಳಿದರು.
ಶಿಕ್ಷಣದ ವಿಚಾರ ಬಂದಾಗ ಧರ್ಮ, ಸಮುದಾಯ ಎನ್ನುವುದು ಇರುವುದಿಲ್ಲ. ಶಿಕ್ಷಣಕ್ಕೆ ಆದ್ಯತೆ, ಭವಿಷ್ಯ, ವ್ಯಕ್ತಿತ್ವ ಮುಖ್ಯವಾಗುತ್ತದೆ. ಮಕ್ಕಳು ದಾರಿ ತಪ್ಪದಂತೆ ಹೆತ್ತವರು ಜಾಗೃತೆ ವಹಿಸಬೇಕು ಎಂದು ಸಲಹೆ ನೀಡಿದರು.