ಶಿವಮೊಗ್ಗ: ನಗರದಲ್ಲಿ ಈಗ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದ್ದು, ಗಣಪತಿ ಹಬ್ಬ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಶಿವಮೊಗ್ಗದ ಪ್ರಸಿದ್ಧ ಹಿಂದೂ ಮಹಾಸಭಾ ಗಣಪತಿ ಸಮಿತಿ ಪ್ರಮುಖರೊಂದಿಗೆ ಎಡಿಜಿಪಿ ಅಲೋಕ್ ಕುಮಾರ್ ಇಂದು ಚರ್ಚೆ ನಡೆಸಿದರು.
ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ ಮಾಡುವ ಕೋಟೆ ಭೀಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ಸ್ಥಳ ಪರಿಶೀಲನೆ ನಡೆಸಿ ಪ್ರಮುಖರೊಂದಿಗೆ ಮಾಹಿತಿ ಪಡೆದರು. ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲರೂ ಸೇರಿ ಶಾಂತಿ ಸೌಹಾರ್ದತೆ ಕಾಪಾಡಬೇಕು ಎಂದು ಮನವಿ ಮಾಡಿದರು.
ಪೊಲೀಸರು ಎಲ್ಲಾ ರೀತಿಯ ಸಹಕಾರ ನೀಡುತ್ತಾರೆ. ಸಾರ್ವಜನಿಕರು ಮತ್ತು ಸಮಿತಿಯವರು ಕೂಡ ಪೊಲೀಸರಿಗೆ ಸಹಕಾರ ನೀಡಬೇಕು. ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ಮಾಡುವವರ ಮೇಲೆ ಪೊಲೀಸ್ ಶಿಸ್ತು ಕ್ರಮ ಕೈಗೊಳ್ಳಲಿದೆ. ಈಗಾಗಲೇ ಭದ್ರತೆ ಹೆಚ್ಚಿಸಲಾಗಿದೆ. ಯಾರೋ ಕೆಲವು ಕಿಡಿಗೇಡಿಗಳಿಂದ ಇಡೀ ಸಮಾಜದ ಶಾಂತಿ ಸುವ್ಯವಸ್ಥೆಗೆ ಭಂಗವಾಗುತ್ತದೆ. ಈ ನಿಟ್ಟಿನಲ್ಲಿ ಎರಡೂ ಸಮುದಾಯದವರು ಅಂತಹ ಕಿಡಿಗೇಡಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.