ಬೆಂಗಳೂರು: ಬಿಜೆಪಿ ಯುವ ಮುಖಂಡನ ಹತ್ಯೆ, ರಾಜ್ಯದಲ್ಲಿ ನಡೆದ ಸಾಲು ಸಾಲು ಹಿಂದೂ ಪರ ಸಂಘಟನೆ ಕಾರ್ಯಕರ್ತರ ಕಗ್ಗೊಲೆಗಳ ಬೆನ್ನಲ್ಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರವೀಣ್ ನೆಟ್ಟಾರು ಹಂತಕರ ಬಂಧನದ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ರಾಜ್ಯ ಸರ್ಕಾರ ತನ್ನ ಪೊಲೀಸ್ ಪಡೆಯ ಮೇಲೆಯೇ ವಿಶ್ವಾಸ ಕಳೆದುಕೊಂಡಿದೆ. ಕಾರ್ಯಕರ್ತರಿಗೆ ಉಡಾಫೆ ಉತ್ತರ ಕೊಡುತ್ತಿದ್ದಾರೆ. ಇದೇ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಕಿಡಿಕಾರಿದ್ದಾರೆ.
23 ಹಿಂದೂ ಕಾರ್ಯಕರ್ತರ ಸಮಾಧಿ ಮೇಲೆ ಸರ್ಕಾರ ಬಂದಿದೆ. ಎಲ್ಲಾ ಸವಲತ್ತು, ಸೌಲಭ್ಯದ ಬಳಿಕ ಹೀಗೆ ಹೇಳುವುದು ಎಷ್ಟು ಸರಿ. ಇನ್ನು ಎಂಟು ತಿಂಗಳಿದೆ ಎಲ್ಲರೂ ಸೇರಿ ಹೋಗೋಣ ಎಂದು ಪ್ರೀತಿಯಿಂದ ಹೇಳದೇ ಉಡಾಫೆ ಮಾತನಾಡಿರುವುದೇ ಆಕ್ರೋಶ ವ್ಯಕ್ತವಾಗಲು ಕಾರಣ. ಪ್ರವೀಣ್ ನೆಟ್ಟಾರು ಹತ್ಯೆ ಮಾತ್ರಕ್ಕೆ ಕಾರ್ಯಕರ್ತರು ಇಷ್ಟು ಬೇಸರಗೊಂಡಿಲ್ಲ. ಕಳೆದ ಮೂರು ವರ್ಷದಿಂದ ಸರ್ಕಾರದ ಆಡಳಿತ ವೈಖರಿಗೆ ಬೇಸತ್ತು ಈಗ ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಬೆಲೆ ಹೆಚ್ಚು. ನಾಯಕರು ರಾಜೀನಾಮೆ ನೀಡಿದರೆ ನೂರಾರು ಕಾರ್ಯಕರ್ತರು ಆ ಜಾಗ ತುಂಬಲು ಸಮರ್ಥರಿದ್ದಾರೆ. ಆದರೆ ಕಾರ್ಯಕರ್ತನ ಸ್ಥಾನ ತುಂಬಲು ಒಬ್ಬ ಸಮರ್ಥ ನಾಯಕ ಮುಂದೆ ಬರಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿಯವರು ರಾಜ್ಯವನ್ನು ಉತ್ತರಪ್ರದೇಶ ಮಾಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ಸಿಎಂ ಬೊಮ್ಮಾಯಿ ಅವರೇ ರಾಜ್ಯವನ್ನು ಯುಪಿ ತರ ಮಾಡಿದ್ದೀರಾ. ಹಾಗಾಗಿ ನೀವು ಇಲ್ಲಿ ಯುಪಿ ಮಾಡೆಲ್ ತರಬಹುದು. ಯುಪಿಯಲ್ಲಿ ಯೋಗಿ ಬರುವುದಕ್ಕೂ ಮೊದಲು ಹೇಗಿತ್ತೋ ಹಾಗೆ ರಾಜ್ಯ ಮಾಡಿದ್ದೀರಾ ಹಾಗಾಗಿ ಯುಪಿ ಮಾಡೆಲ್ ತರಲು ಹೊರಟಿದ್ದೀರಾ ಎಂದು ವಾಗ್ದಾಳಿ ನಡೆಸಿದ್ದಾರೆ.