ಕಲಬುರ್ಗಿ: ಹಿಂದೂ ಧರ್ಮದ ಪರ ನನಗೆ ಯಾವತ್ತೂ ನಿಷ್ಠೆ ಇದೆ. ಅವನ್ಯಾವನೋ ಸಿ.ಟಿ.ರವಿ ಮಾತಾಂಧ ನನ್ನ ಬಗ್ಗೆ ಮಾತಾಡ್ತಾನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಕಲಬುರ್ಗಿ ಜಿಲ್ಲೆಯ ಅಫಜಲಪುರದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಯ ಸಿ.ಟಿ.ರವಿ ನನ್ನ ಸಿದ್ರಾಮುಲ್ಲಾ ಖಾನ್ ಎಂದು ಕರೆಯುತ್ತಿದ್ದಾನೆ. ಇವನ್ಯಾವನು ನನ್ನ ಸಿದ್ರಾಮುಲ್ಲಾಖಾನ್ ಎಂದು ಕರೆಯೋಕೆ? ನನ್ನ ತಂದೆ-ತಾಯಿ ನನಗೆ ಸಿದ್ದರಾಮಯ್ಯ ಎಂದು ಹೆಸರಿಟ್ಟಿದ್ದಾರೆ. ನೀನು ಯಾವ ಧರ್ಮದವನು ಎಂದು ಬೇಕಾದ್ರೆ ಕರೆದ್ಕೋ. ನಾನು ಹಿಂದೂ ಧರ್ಮದಲ್ಲಿ ಹುಟ್ಟಿರೋದು. ಹಿಂದು ಧರ್ಮದ ಪರ ನನಗೆ ಯಾವತ್ತೂ ನಿಷ್ಠೆಯಿದೆ ಎಂದರು.
ಹಿಂದೂ ಆದ್ರೆ ಹಿಂದೂ ಧರ್ಮಕ್ಕೆ ಗೌರವ ಕೊಡು, ಪ್ರೀತಿಸು. ಆದರೆ ಬೇರೆ ಧರ್ಮದವರಿಗೆ ಯಾಕೆ ತೊಂದರೆ ಕೊಡ್ತೀಯಾ? ನನಗೆ ಕಾಯಿಲೆ ಬಂದಾಗ ಕುರುಬರ ರಕ್ತಕೊಡಿ ಅಂತೀನಾ? ಆಪರೇಷನ್ ಮಾಡೋವಾಗ ಕುರುಬರ ರಕ್ತ ಕೊಡಿ ಅಂತೀನಾ? ಮುಸ್ಲಿಂರು, ಕ್ರೈಸ್ತರ ರಕ್ತ ಕೊಡಬೇಡಿ ಅನ್ನೋಕೆ ಆಗುತ್ತಾ? ಡಾಕ್ಟ್ರೇ ಮೊದಲು ನನ್ನ ಜೀವ ಉಳಿಸು ಎಂದು ಕೇಳುತ್ತೇನೆ ಎಂದು ಹೇಳಿದರು.
ನಾನು ಹಿಂದೂ ಧರ್ಮದ ಪರವಾಗಿಯೂ ಮಾತನಾಡುತ್ತೇನೆ. ಬೇರೆ ಧರ್ಮದ ಪರವಾಗಿಯೂ ಮಾತನಾಡುತ್ತೇನೆ. ಸಂವಿಧಾನದ ಪ್ರಕಾರ ಮಾತನಾಡಬೇಕಾ? ಬಿಜೆಪಿಯವರು ಹೇಳಿದಂತೆ ಮಾತನಾಡಬೇಕಾ? ಧರ್ಮದ ಆಧಾರಾದ ಮೇಲೆ ರಾಜಕೀಯ ಮಾಡುತ್ತಿರುವುದು ಬಿಜೆಪಿಯವರು. ಬಿಜೆಪಿಯವರಿಗೆ ಆರ್ ಎಸ್ ಎಸ್ ನವರು ಮಾತ್ರ ಮನುಷ್ಯರಂತೆ ಕಾಣ್ತಾರೆ ಎಂದು ವಾಗ್ದಾಳಿ ನಡೆಸಿದರು.