ದೇಶದಾದ್ಯಂತ ಸೆಪ್ಟೆಂಬರ್ 14ರ ಇಂದು ‘ಹಿಂದಿ ದಿವಸ’ ವನ್ನು ಆಚರಿಸಲಾಗುತ್ತಿದ್ದು, ಇದಕ್ಕೆ ಕೆಲವು ರಾಜ್ಯಗಳಿಂದ ವಿರೋಧ ವ್ಯಕ್ತವಾಗಿದೆ. ಇದರ ಮಧ್ಯೆ ಹಿಂದಿ ದಿವಸ ಕುರಿತಂತೆ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ, ಹಿಂದಿ ಭಾಷೆ ದೇಶವನ್ನು ಒಗ್ಗೂಡಿಸುತ್ತದೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ವಿದೇಶಕ್ಕೆ ಹೋದರೂ ಸಹ ಹಿಂದಿಯಲ್ಲೇ ಭಾಷಣ ಮಾಡುತ್ತಾರೆ. ಹಿಂದಿ ಭಾಷೆಗೆ ಸರಳತೆ, ಸ್ವಾಭಾವಿಕ ಸೂಕ್ಷ್ಮತೆ ಇದ್ದು, ಇದು ಎಲ್ಲರನ್ನೂ ಆಕರ್ಷಿಸುತ್ತದೆ ಎಂದು ಹೇಳಿರುವ ಅಮಿತ್ ಶಾ, ಹಿಂದಿ ದಿವಸದ ಶುಭಾಶಯ ಕೋರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರೂ ಕೂಡ ಟ್ವೀಟ್ ಮಾಡಿ ದೇಶದ ಜನತೆಗೆ ಹಿಂದಿ ದಿವಸದ ಶುಭಾಶಯ ಕೋರಿದ್ದಾರೆ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ‘ಹಿಂದಿ ದಿವಸ’ ಆಚರಣೆ ಕುರಿತು ಪರ – ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.