ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಮತ್ತೆ ಮುಂದುವರೆದಿದ್ದು, ಕೆಲ ಸಾಹಿತಿಗಳು ಹಿಂದೂ ಮಲಗಿದರೆ ದೇಶ ಮಲಗುತ್ತದೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್, ಪಠ್ಯ ಪುಸ್ತಕ ಪರಿಷ್ಕರಣೆಯನ್ನು ಸಮರ್ಥಿಸಿಕೊಂಡಿದ್ದಾರೆ. ಹಿಂದಿನ ಸರ್ಕಾರಗಳು ಕೆಲವು ಪಠ್ಯಗಳನ್ನು ತೆಗೆದು ಹಾಕಿವೆ. ಅವರಿಗೆ ರಾಮ, ಈಶ್ವರ ಹೆಸರು ಕೇಳಲು ಇಷ್ಟ ಇರಲಿಲ್ಲ. ಅವರಿಗೆ ಬೇಕಾದಂತೆ ಪಠ್ಯಗಳನ್ನು ಸೇರಿಸುತ್ತಿದ್ದರು. ನಮ್ಮ ಸರ್ಕಾರ ಇದ್ದಾಗ ಕುವೆಂಪು ಅವರ 8 ಪದ್ಯ/ಗದ್ಯ ಸೇರಿಸಿದ್ದೆವು. ಹಿಡನ್ ಅಜೆಂಡಾ ಇರುವ ಸಾಹಿತಿಗಳು ಪಠ್ಯ ಪುಸ್ತಕ ಪರಿಷ್ಕರಣೆ ವೇಳೆ ಯಾಕೆ ಧ್ವನಿ ಎತ್ತಿಲ್ಲ? ಈಗೇಕೆ ಹೋರಾಟ ನಡೆಸಿದ್ದಾರೆ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಟಿಪ್ಪು ಹೆಸರು ಹೇಳಿದರೆ ಮೈಮೇಲೆ ಬಂದವರಂತೆ ಆಡುತ್ತಾರೆ. ಟಿಪ್ಪು ವೈಭವೀಕರಿಸುತ್ತಿದ್ದ ಕೆಲವರು ಮೈಸೂರು ರಾಜವಂಶಸ್ಥರ ಕೊಡುಗೆಗಳನ್ನು ಕಡೆಗಣಿಸುತ್ತಿದ್ದರು. ಕುವೆಂಪು ಅವರ 8 ಗದ್ಯ/ ಪದ್ಯ ಬದಲು ಹಂಸಲೇಖ ಅವರ ಬಣ್ಣದ ಬುಗುರಿ ಪದ್ಯ ಸೇರಿಸಿದ್ದರು. ಈಗ ಕಾಂಗ್ರೆಸ್ ನವರು ಕುವೆಂಪು ಬಗ್ಗೆ ನಮ್ಮ ಸರ್ಕಾರ ತಾರತಮ್ಯ ಮಾಡಿದೆ ಎಂದು ಆರೋಪಿಸುತ್ತಿದ್ದಾರೆ. ನಮ್ಮ ಸರ್ಕಾರ ಕುವೆಂಪು ಅವರ 10 ಗದ್ಯ/ಪದ್ಯಗಳನ್ನು ಪಠ್ಯದಲ್ಲಿ ಸೇರಿಸಿದೆ ಎಂದು ಹೇಳಿದರು.
ಮೈಸೂರು ಮನೆತನದ ಅಧಿದೇವತೆಯ ವಿವರಗಳನ್ನು ತೆಗೆಯಲಾಗಿತ್ತು. ಟಿಪ್ಪು ವರ್ಣನೆಗೆ ಹೆಚ್ಚು ಮೀಸಲಿಟ್ಟು ಮೈಸೂರು ಒಡೆಯರನ್ನು ಕಡೆಗಣಿಸಲಾಯಿತು. ಮಥುರಾ, ಶ್ರೀಕೃಷ್ಣ ಮಂದಿರ, ಸೋಮನಾಥ ದೇವಾಲಯಗಳಿಗೆ ಸಂಬಂಧಿಸಿದ ಅಂಶಗಳನ್ನು ಕೈಬಿಡಲಾಗಿದೆ. ಆಗ ಈ ಸಾಹಿತಿಗಳು ಮೌನವಾಗಿದ್ದು, ಈಗ ಏಕೆ ಮಾತನಾಡುತ್ತಿದ್ದಾರೆ ಎಂದು ಕೇಳಿದ್ದಾರೆ.