ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಕಣಕ್ಕಿಳಿಯಲು ಮಾಜಿ ಸಚಿವ ಎಚ್.ಡಿ. ರೇವಣ್ಣನವರ ಪತ್ನಿ ಭವಾನಿ ರೇವಣ್ಣ ಸಿದ್ಧತೆ ನಡೆಸುತ್ತಿದ್ದು ಈಗಾಗಲೇ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ.
ಇದೇ ಕ್ಷೇತ್ರದಿಂದ ಕಣಕ್ಕಿಳಿಯಲು ಮಾಜಿ ಶಾಸಕ ಪ್ರಕಾಶ್ ಅವರ ಪುತ್ರ ಸ್ವರೂಪ್ ಕೂಡ ಆಕಾಂಕ್ಷಿಯಾಗಿದ್ದು, ಜೆಡಿಎಸ್ ಪರ ಈಗಾಗಲೇ ಪ್ರಚಾರ ನಡೆಸುತ್ತಿದ್ದಾರೆ. ಹೀಗಾಗಿ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರ ಜೆಡಿಎಸ್ ನಾಯಕರಿಗೆ ಕಗ್ಗಂಟಾಗಿ ಪರಿಣಮಿಸಿದೆ.
ಇದರ ಮಧ್ಯೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ಹಾಸನದಿಂದ ಸಾಮಾನ್ಯ ಕಾರ್ಯಕರ್ತರೊಬ್ಬರನ್ನು ಕಣಕ್ಕಿಳಿಸುವುದಾಗಿ ಎರಡು ವರ್ಷಗಳ ಹಿಂದೆಯೇ ಹೇಳಿದ್ದೆ. ಆ ಹೇಳಿಕೆಗೆ ಈಗಲೂ ನಾನು ಬದ್ಧನಾಗಿದ್ದೇನೆ ಎಂದಿದ್ದಾರೆ.
ಅಲ್ಲದೆ ಬಿಜೆಪಿ ಅಭ್ಯರ್ಥಿ ಏನು ಹೇಳಿದರೂ ಪರವಾಗಿಲ್ಲ. ಅದಕ್ಕೆ ತಲೆಕೆಡಿಸಿಕೊಳ್ಳಬೇಕಿಲ್ಲ ಎನ್ನುವ ಮೂಲಕ ಕುಮಾರಸ್ವಾಮಿ, ಹಾಸನದಿಂದ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಸಿಗುವುದು ಡೌಟ್ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.
ಕುಮಾರಸ್ವಾಮಿಯವರು ನಾಳೆ ಬೆಂಗಳೂರಿನಲ್ಲಿ ಹಾಸನ ಕ್ಷೇತ್ರದ ಜೆಡಿಎಸ್ ಮುಖಂಡರ ಸಭೆ ಕರೆದಿದ್ದು, ಈ ಸಭೆಯಲ್ಲಿ ಯಾರಿಗೆ ಟಿಕೆಟ್ ಎಂಬ ವಿಚಾರ ಖಚಿತವಾಗಲಿದೆ ಎಂದು ತಿಳಿದು ಬಂದಿದೆ.