ವಿಧಾನಸಭಾ ಚುನಾವಣೆಗೆ ಈಗಾಗಲೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿರುವ ಜೆಡಿಎಸ್ ಪಕ್ಷ, ಎರಡನೇ ಪಟ್ಟಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿತ್ತಾದರೂ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಕಾರಣಕ್ಕಾಗಿ ನೆನೆಗುದಿಗೆ ಬೀಳುವಂತಾಗಿದೆ.
ಹಾಸನ ಟಿಕೆಟ್ ಗಾಗಿ ಭವಾನಿ ರೇವಣ್ಣ ಹಾಗೂ ಸ್ವರೂಪ್ ಆಕಾಂಕ್ಷಿಗಳಾಗಿದ್ದು, ಪತ್ನಿಗೆ ಟಿಕೆಟ್ ಕೊಡಿಸಲು ಹೆಚ್.ಡಿ. ರೇವಣ್ಣ ಪ್ರಯತ್ನ ನಡೆಸುತ್ತಿದ್ದರೆ, ಸ್ವರೂಪ್ ಪರವಾಗಿ ಹೆಚ್.ಡಿ. ಕುಮಾರಸ್ವಾಮಿ ನಿಂತಿದ್ದಾರೆ. ಇದನ್ನು ಪರಿಹರಿಸುವ ಸಲುವಾಗಿ ಭಾನುವಾರ ದೇವೇಗೌಡರ ನಿವಾಸದಲ್ಲಿ ಸಭೆ ನಡೆಸಲಾಯಿತಾದರೂ ಯಾವುದೇ ಫಲಿತಾಂಶ ಹೊರಬೀಳಲಿಲ್ಲ.
ದೇವೇಗೌಡರು ಸಹ ಸ್ವರೂಪ್ ಅವರಿಗೆ ಟಿಕೆಟ್ ನೀಡುವ ಕುರಿತು ಒಲವು ಹೊಂದಿದ್ದಾರೆ ಎನ್ನಲಾಗಿದ್ದು, ಭವಾನಿ ರೇವಣ್ಣ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ಭರವಸೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ. ಆದರೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಭವಾನಿ ರೇವಣ್ಣ ಉತ್ಸುಕರಾಗಿದ್ದು, ಇದೀಗ ಹೆಚ್.ಡಿ. ದೇವೇಗೌಡರು ಯಾವ ತೀರ್ಮಾನ ಕೈಗೊಳ್ಳಲಿದ್ದಾರೋ ಅದೇ ಫೈನಲ್ ಎಂದು ಹೇಳಲಾಗಿದೆ.