ಮಂಡ್ಯ: ಕರ್ನಾಟಕದಿಂದ ವರ್ಷಕ್ಕೆ 3.5 ಲಕ್ಷ ಕೋಟಿ ತೆರಿಗೆ ಕೇಂದ್ರ ಸರ್ಕಾರಕ್ಕೆ ಹೋಗುತ್ತೆ. ಅದರಲ್ಲಿ 3 ಲಕ್ಷ ಕೋಟಿ ಕೇಂದ್ರ ಸರ್ಕಾರದ ಬಳಿಯೇ ಇರುತ್ತೆ. 50 ಸಾವಿರ ಕೋಟಿ ವಾಪಸ್ ಕೊಟ್ಟು ಬಾಕಿಯೆಲ್ಲ ಮಜಾ ಮಾಡ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮಳೆಯಿಂದ ಮನೆ, ಬೆಳೆ ಹಾನಿಯಾಗಿದೆ. ಪರಿಹಾರ ಕೊಟ್ಟಿದ್ದಾರಾ? ಪ್ರವಾಹ ಬಂದಾಗ ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಿದ್ದಾರಾ? ದೇಶ ಉಳಿಯಬೇಕಾದರೆ ಮೊದಲು ಬಿಜೆಪಿಯನ್ನು ಕಿತ್ತೊಗೆಯಬೇಕು. ಇಲ್ಲವಾದರೆ ಶಾಂತಿ, ನೆಮ್ಮದಿ, ಸಂವಿಧಾನವೇ ಉಳಿಯುವುದಿಲ್ಲ ಎಂದು ಹೇಳಿದರು.
ಮಂಡ್ಯದಲ್ಲಿ 800 ಕೋಟಿ ನಷ್ಟ ಆಗಿದ್ರೆ 12 ಕೋಟಿ ಪರಿಹಾರ ಕೊಟ್ಟಿದ್ದಾರೆ. ಯಾಕೆ ಮಂಡ್ಯದ ಜನರು ರಾಜ್ಯ ಸರ್ಕಾರಕ್ಕೆ ತೆರಿಗೆ ಕಟ್ಟಿಲ್ಲವೇ? ಹಾಲು, ಮೊಸರು, ಕಡಲೇಪುರಿಗೂ ಇವರು ಟ್ಯಾಕ್ಸ್ ಹಾಕಿದ್ದಾರೆ. ಬಡವರ ರಕ್ತ ಹೀರುವ ಇವರು ಮನುಷ್ಯರೋ, ರಾಕ್ಷಸರೋ? ಎಂದು ವಾಗ್ದಾಳಿ ನಡೆಸಿದರು.
ಒಡೆದ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ರಾಹುಲ್ ಗಾಂಧಿ ಐಕ್ಯತಾ ಭಾರತ ನಿರ್ಮಾಣಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ರಾಹುಲ್ ಗಾಂಧಿಯವರಿಗೆ ಬೆಂಬಲಿಸಿ ಎಂದು ಕರೆ ನೀಡಿದರು.