ಶಿವಮೊಗ್ಗ: ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್. ನೌಕರರ ಸಂಘದಿಂದ ಮಾಡು ಇಲ್ಲವೇ ಮಡಿ ಅನಿರ್ಧಿಷ್ಟಾವಧಿ ಹೋರಾಟವನ್ನು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಡಿ.19 ರಿಂದ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಕೆ.ಎನ್. ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಕೆಲಸಕ್ಕೆ ಸೇರುವ ನೌಕರರಿಗೆ 2006 ರಿಂದ ನೂತನ ಪಿಂಚಣಿ ಯೋಜನೆ(ಎನ್.ಪಿ.ಎಸ್.) ಜಾರಿಗೆ ತಂದಿದ್ದು, ಇದೊಂದು ಅವೈಜ್ಞಾನಿಕ ಯೋಜನೆಯಾಗಿದೆ. ನಿವೃತ್ತಿಯಾಗುವ ನೌಕರರಿಗೆ ಕನಿಷ್ಠ ವೇತನ ಸಿಕ್ಕುತ್ತಿಲ್ಲ. ಇದನ್ನು ಸರಿಪಡಿಸುವಂತೆ ಮೊದಲಿನಿಂದಲೂ ಆಗ್ರಹಿಸುತ್ತಿದ್ದರೂ ಕೂಡ ಸರ್ಕಾರ ಅದನ್ನು ಪರಿಗಣಿಸುತ್ತಿಲ್ಲ ಎಂದರು.
ಈ ಯೋಜನೆಯಡಿ ಕೆಲಸಕ್ಕೆ ಸೇರಿಕೊಂಡ ಕೆಲವರು ಈಗಾಗಲೇ ನಿವೃತ್ತಿಯಾಗುತ್ತಿದ್ದಾರೆ. ಅಂತಹವರಿಗೆ ಕೇವಲ 800 ಹಾಗೂ 1000 ದ ಒಳಗೆ ನಿವೃತ್ತಿ ವೇತನ ಸಿಕ್ಕುತ್ತಿದೆ. ಇನ್ನು ಕೆಲವರಿಗೆ ಅದೂ ಸಿಕ್ಕುತ್ತಿಲ್ಲ. ಜೀವನ ಪೂರ್ತಿ ದುಡಿದ ನೌಕರರಿಗೆ ನಿವೃತ್ತಿ ಅವಧಿಯಲ್ಲಿ ಯಾವುದೇ ವೇತನವೂ ಇಲ್ಲದೆ ಪರಿತಪಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿವೃತ್ತಿಯಾಗುವ ನೌಕರರಿಗೆ ಯಾವುದೇ ಆರ್ಥಿಕ ಭದ್ರತೆ ಇಲ್ಲದಂತಾಗಿದೆ. ಇದನ್ನು ಜಾರಿಗೊಳಿಸುವಾಗ ಷೇರು ಮಾರುಕಟ್ಟೆಯಲ್ಲಿ ತೊಡಗಿಸಿದರೆ ತಿಂಗಳಿಗೆ ಕೋಟಿಗಟ್ಟಲೆ ಹಣ ಬರುತ್ತದೆ ಎಂದು ಬಿಂಬಿಸಲಾಗಿತ್ತು. ಆದರೆ ಈಗ ನೂರರ ಲೆಕ್ಕದಲ್ಲಿ ವೇತನ ಸಿಕ್ಕುವಂತಾಗಿದೆ. ಇದನ್ನು ನಂಬಿ ನಿವೃತ್ತಿ ಜೀವನ ನಡೆಸುವುದು ತುಂಬಾ ಕಷ್ಟವಾಗಲಿದೆ. ರಾಜಕಾರಣಿಗಳಿಗೆ ಮಾತ್ರ ಹಳೇ ನಿವೃತ್ತಿ ವೇತನವನ್ನು ಇಟ್ಟುಕೊಂಡು ನೌಕರರನ್ನು ನೂತನ ನಿವೃತ್ತಿ ವೇತನ ಯೋಜನೆಗೆ ಒಳಪಡಿಸಿ ಅನ್ಯಾಯ ಮಾಡಲಾಗಿದೆ ಎಂದರು.
ಈಗಾಗಲೇ ನಿವೃತ್ತಿಯಾಗಿರುವ ಕೆಲವರಿಗೆ ತಾಂತ್ರಿಕ ದೋಷದಿಂದಾಗಿ ಯಾವುದೇ ಸೌಲಭ್ಯಗಳು ಸಿಕ್ಕುತ್ತಿಲ್ಲ. ಪ್ರತೀ ತಿಂಗಳು ಕಟಾಯಿಸಿಕೊಳ್ಳುತ್ತಿರುವ ಹಣವನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸುತ್ತಿರುವುದರಿಂದಾಗಿ ಯಾವುದೇ ನೌಕರರಿಗೂ ಹೆಚ್ಚಿನ ವೇತನ ಸಿಕ್ಕುತ್ತಿಲ್ಲ. ಹೀಗಾಗಿ ಎನ್.ಪಿ.ಎಸ್.ನ ಎಲ್ಲಾ ನೌಕರರು ರಜೆ ಹಾಕಿ ಅಂದು ಬೆಂಗಳೂರಿಗೆ ತೆರಳಿ ಹೋರಾಟ ನಡೆಸಲಿದ್ದಾರೆ ಎಂದು ಹೇಳಿದರು.