alex Certify BIG NEWS: ಹಲಾಲ್ ವಿವಾದ; ಭಜರಂಗದಳ ಕಾರ್ಯಕರ್ತರು ಸಮಾಜಘಾತುಕರು; ಮಾನ-ಮರ್ಯಾದೆ ಇದ್ದರೆ ಸಿಎಂ ಮೌನ ಬಿಟ್ಟು ಮಾತನಾಡಲಿ; ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ H.D.K | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹಲಾಲ್ ವಿವಾದ; ಭಜರಂಗದಳ ಕಾರ್ಯಕರ್ತರು ಸಮಾಜಘಾತುಕರು; ಮಾನ-ಮರ್ಯಾದೆ ಇದ್ದರೆ ಸಿಎಂ ಮೌನ ಬಿಟ್ಟು ಮಾತನಾಡಲಿ; ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ H.D.K

ರಾಮನಗರ: ರಾಜ್ಯದಲ್ಲಿ ಹಲಾಲ್ ವಿವಾದ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದ್ದು, ಹಲಾಲ್ ವಿರುದ್ಧ ಜಟ್ಕಾ ಕಟ್ ಅಭಿಯಾನ ಆರಂಭಿಸಿರುವ ಹಿಂದೂ ಪರ ಸಂಘಟನೆ, ಭಜರಂಗ ದಳ ಕಾರ್ಯಕರ್ತರ ವಿರುದ್ಧ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಸಮಾಜ ಒಡೆಯಲು ಹ್ಯಾಂಡ್ ಬಿಲ್ ಹಂಚುತ್ತಿದ್ದರೂ ಮೌನವಾಗಿರುವ ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರ ಸಂವಿಧಾನಕ್ಕೆ ಯಾವ ರೀತಿಯ ಗೌರವ ಕೊಡುತ್ತಿದೆ ? ಎಂದು ಪ್ರಶ್ನಿಸಿದ್ದಾರೆ.

ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಹಲಾಲ್ ಎನ್ನುವುದು ಇಂದು ನಿನ್ನೆ ಆರಂಭವಾಗಿದ್ದಲ್ಲ, ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇಷ್ಟು ವರ್ಷ ಅದೇ ಸಮಾಜದವರು ಕೊಡುತ್ತಿದ್ದ ಹಲಾಲ್ ಮಾಂಸದ ಬಗ್ಗೆ ಸುಮ್ಮನಿದ್ದು, ಈಗ ಅಪಚಾರ, ವಿಷಭರಿತ ಅಂಶವಿರುತ್ತದೆ ಎಂಬ ಹೇಳಿಕೆ ನೀಡಿ ಸಮಾಜ ಒಡೆಯುತ್ತಿರುವುದು ಎಷ್ಟು ಸರಿ ? ಭಜರಂಗದಳ ಕಾರ್ಯಕರ್ತರು, ವಿಶ್ವ ಹಿಂದೂ ಪರಿಷತ್ ನವರು ಹಲಾಲ್ ನಿಷೇಧಿಸಿ, ಜಟ್ಕಾ ಕಟ್ ಅಭಿಯಾನದ ಜಾಗೃತಿ ಹೆಸರಲ್ಲಿ ಹ್ಯಾಂಡ್ ಬಿಲ್ ಹಂಚಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಭಜರಂಗದಳ ಕಾರ್ಯಕರ್ತರು ಸಮಾಜ ಘಾತುಕರು ಎಂದು ವಾಗ್ದಾಳಿ ನಡೆಸಿದ್ದಾರೆ.

ಕುರಿ, ಕೋಳಿ ಕಟ್ ಮಾಡಿ ಕ್ಲೀನ್ ಮಾಡಲು ಇವರಿಗೆ ಅದೇ ಸಮಾಜದವರು ಬೇಕು. ದ್ರಾಕ್ಷಿ, ರೇಷ್ಮೆ ಬೆಳೆ ರೈತರಿಂದ ಖರೀದಿಸಿ ಮಾರಲು ಅವರೇ ಬೇಕು. ರೈತರಿಂದ ಮಾವು ಖರೀದಿಸಲು ಅದೇ ಸಮಾಜದವರು ಬೇಕು. ಭಜರಂಗದಳ, ವಿಶ್ವ ಹಿಂದೂ ಪರಿಷತ್ ನವರು ರೈತರಿಂದ ಬೆಳೆ ಖರೀದಿಸಿ, ಸಹಾಯ ಮಾಡಿದ್ದಾರಾ ? ಅಕಾಲಿಕ ಮಳೆಯಿಂದಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಇಲ್ಲದೇ ಸಾವಿರಾರು ಜನರು ಬೀದಿ ಬೀದಿಯಲ್ಲಿ ಸಾವನ್ನಪ್ಪಿದರು ಆಗ ಭಜರಂಗ ದಳದವರು, ವಿಶ್ವ ಹಿಂದೂ ಪರಿಷತ್ ನವರು ಎಲ್ಲಿಗೆ ಹೋಗಿದ್ದರು ? ಇಷ್ಟು ವರ್ಷ ಇಲ್ಲದ ಹಲಾಲ್ ಸಮಸ್ಯೆ ಈಗ ಏಕೆ ಆರಂಭವಾಗಿದೆ ? ಇಷ್ಟು ವರ್ಷ ತಿಂದಾಗ ಇವರಿಗೆ ಯಾವುದೇ ಸಮಸ್ಯೆ ಆಗಲಿಲ್ಲ ಚೆನ್ನಾಗಿದ್ದೀರಿ. ಈಗ ಹಲಾಲ್ ಅಲ್ಲಾಗೆ ಸಮರ್ಪಿಸಿ ಬಳಿಕ ವ್ಯಾಪಾರ ಮಾಡುತ್ತಾರೆ ಅದಕ್ಕೆ ನಮ್ಮ ದೇವರಿಗೆ ಅಪಚಾರ ಎನ್ನುತ್ತಿದ್ದೀರಿ ಆಗ ದೇವರು ಕಾಣಲಿಲ್ವಾ ? ಈಗ ದೇವರು ಬಂದು ಹೇಳಿದನಾ ಅಪಚಾರ ಎಂದು ? ಎಂದು ಪ್ರಶ್ನಿಸಿದ್ದಾರೆ.

ಸಮಾಜ ಒಡೆಯಲು ಹ್ಯಾಂಡ್ ಬಿಲ್ ಹಂಚಿ ಓಡಾಡುತ್ತಿದ್ದಾರೆ. ಜಾಗೃತಿ ಅಭಿಯಾನ ಎಂದು ದ್ವೇಷದ ಭಾವನೆ ಬಿತ್ತುತ್ತಿದ್ದಾರೆ. ಹಲಾಲ್ ವಿವಾದ ಕೆಲದಿನಗಳಿಂದ ನಡೆಯುತ್ತಿದೆ. ಆದರೂ ಎಲ್ಲ ಗೊತ್ತಿದ್ದೂ ತಮಗೇನೂ ಗೊತ್ತೇ ಇಲ್ಲ ಎನ್ನುವಂತೆ ಸಿಎಂ ಮೌನವಾಗಿರುವುದೇಕೆ ? ಸಿಎಂ ಗೆ ಮಾನ ಮರ್ಯಾದಿ ಇದ್ದರೆ, ಗಂಡಸ್ತನ ಇದ್ದರೆ ಮೌನ ಮುರಿಯಲಿ. ಇಂತವರ ವಿರುದ್ಧ ಕ್ರಮ ಕೈಗೊಳ್ಳಲಿ. ಕೇಸರಿ ಬಟ್ಟೆ ಹಾಕಿ ಹಳ್ಳಿ ಹಳ್ಳಿಗಳಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡಲಾಗುತ್ತಿದೆ. ವೋಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ನವರು ಸುಮ್ಮನಿದ್ದಾರೆ ಎಂದು ನಾವು ಸುಮ್ಮನಿರಲು ಸಾಧ್ಯವಿಲ್ಲ. ಕಾಂಗ್ರೆಸ್ ಗೆ ತಾಕತ್ತಿಲ್ಲದಿದ್ದರೆ ಬಿಡಿ, ಮತ ಬ್ಯಾಂಕ್ ಗಿಂತ ನಮಗೆ ಸಮಾಜದಲ್ಲಿ ಶಾಂತಿ ಮುಖ್ಯ. ಸರ್ವಜನಾಂಗದ ಶಾಂತಿ ತೋಟದಲ್ಲಿ ಬೆಂಕಿ ಹಚ್ಚುವ ಕೆಲಸ ಯಾಕೆ ಮಾಡುತ್ತಿದ್ದೀರಿ ? ನಿಮ್ಮ ಆಟಗಳನ್ನು ಉತ್ತರ ಪ್ರದೇಶದಲ್ಲಿ ಇಟ್ಟುಕೊಳ್ಳಿ ಎಂದು ಗುಡುಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...