ಮಡಿಕೇರಿ: ರಾಜ್ಯದಲ್ಲಿ ಆರಂಭವಾಗಿರುವ ಹಲಾಲ್ ವಿವಾದ ವಿಚಾರವಾಗಿ ಮಾತನಾಡಿರುವ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಹಲಾಲ್ ಸ್ವೀಕರಿಸುವುದು, ಬಿಡುವುದು ಜನರ ಇಚ್ಛೆಗೆ ಬಿಟ್ಟದ್ದು ಎಂದು ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವರು, ಹಲಾಲ್ ಎನ್ನುವುದು ಮುಸ್ಲಿಂರ ಧಾರ್ಮಿಕ ವಿಚಾರ. ಈ ವಿಚಾರದಲ್ಲಿ ಸರ್ಕಾರ ಮೂಗು ತೂರಿಸುವುದಿಲ್ಲ. ಯಾರಿಗೆ ಇಷ್ಟ ಇದೆ ಅವರು ಹಲಾಲ್ ಸ್ವೀಕರಿಸುತ್ತಾರೆ. ಯಾರಿಗೆ ಇಷ್ಟ ಇಲ್ಲ ಅವರು ಹಲಾಲ್ ಸ್ವೀಕರಿಸಲ್ಲ. ಈ ವಿಚಾರದಲ್ಲಿ ಅನಗತ್ಯ ಗೊಂದಲಗಳು ಬೇಡ ಎಂದರು.
ಹಲಾಲ್ ಬಗ್ಗೆ ಮಾಧ್ಯಮಗಳಲ್ಲಿನ ಚರ್ಚೆಯಿಂದಾಗಿಯೇ ಇಂದು ಜನರಿಗೆ ಗೊತ್ತಾಗಿದೆ. ಹಲಾಲ್ ನಿಷೇಧದ ಬಗ್ಗೆ ಸರ್ಕಾರದ ಮುಂದೆ ಯಾವುದೇ ವಿಚಾರವಿಲ್ಲ. ಇದು ಸರ್ಕಾರದ ವ್ಯಾಪ್ತಿಗೂ ಬರುವುದಿಲ್ಲ. ಸರ್ಕಾರದ ವ್ಯಾಪ್ತಿಗೆ ಬಾರದ ವಿಷಯದ ಬಗ್ಗೆ ಅನಗತ್ಯವಾಗಿ ಸರ್ಕಾರ ಮೂಗು ತೂರಿಸಲ್ಲ ಎಂದು ಸ್ಪಷ್ಟಪಡಿಸಿದರು.