ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿದ್ದ ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಪ್ರತಿಭಟನೆ ರೂಪ ತಳೆದಿದ್ದು, ಜಾಮಿಯಾ ಮಸೀದಿ ಬಳಿ ಬರುತ್ತಿದ್ದಂತೆ ಮಾಲಾಧಾರಿಗಳು ಹನುಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಘೋಷಣೆಗಳನ್ನು ಕೂಗಲಾರಂಭಿಸಿದ್ದಾರೆ.
ನಿಮಿಷಾಂಬ ದೇವಾಲಯದಿಂದ ಕೋಟೆ ಆಂಜನೇಯ ದೇವಾಲಯದವರೆಗೆ ತೆರಳಬೇಕಿದ್ದ ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಶ್ರೀರಂಗಪಟ್ಟಣದ ಜಾಮೀಯಾ ಮಸೀದಿ ಬಳಿ ಬರುತ್ತಿದ್ದಂತೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಜೈಶ್ರೀರಾಮ್ ಘೋಷಣೆ ಕೂಗುತ್ತ ಹನುಮ ಮಾಲಾಧಾರಿಗಳು ಜಾಮಿಯಾ ಮಸೀದಿಗೆ ನುಗ್ಗಲು ಮುಂದಾಗಿದ್ದಾರೆ. ಮಸೀದಿಯ ಸುತ್ತ ಅಳವಡಿಸಿದ್ದ ಬ್ಯಾರಿಕೇಡ್ ಗಳನ್ನು ಹಾರಿ ಮಸೀದಿ ಒಳಗೆ ನುಗ್ಗಲು ಯತ್ನಿಸಿದ್ದಾರೆ.
ಈ ವೇಳೆ ಪೊಲೀಸರು ಹನುಮ ಮಾಲಾಧಾರಿಗಳನ್ನು ತಡೆಯಲು ಯತ್ನಿಸಿದ್ದಾರೆ. ಪೊಲೀಸರು ಹಾಗೂ ಹನುಮ ಮಾಲಾಧಾರಿಗಳ ನಡುವೆ ನೂಕಾಟ-ತಳ್ಳಾಟ, ವಾಗ್ವಾದ ನಡೆದಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇದೇ ವೇಳೆ ಸಾವಿರಾರು ಹನುಮ ಮಾಲಾಧಾರಿಗಳು ಅಲ್ಲಿ ರಾಮ ಮಂದಿರ ಇಲ್ಲಿ ಹನುಮ ಮಂದಿರ…… ಕಟ್ಟುವೆವು ಕಟ್ಟುವೆವು ಮಂದಿರವ ಕಟ್ಟುವೆವು……ಹನುಮ ಮಂದಿರ ಮರುನಿರ್ಮಾಣ ಮಾಡಬೇಕು ಎಂದು ಘೋಷಣೆ ಕೂಗಿ ಧರಣಿ ನಡೆಸಿದ್ದಾರೆ. ಹನುಮ ಮಾಲಾಧಾರಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಒಟ್ಟಾರೆ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಬಳಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.