ಮಹಿಳೆಯ ಸುರಕ್ಷತೆಗೆ ಇನ್ನಷ್ಟು ಹೆಚ್ಚಿನ ಭದ್ರತೆ ನೀಡುವ ಸಲುವಾಗಿ ಆತ್ಮರಕ್ಷಣೆಯ ತರಬೇತಿಗಳನ್ನು ನೀಡುವ ಪ್ರಯತ್ನಗಳನ್ನು ಹೆಚ್ಚಿಸಲು ಮುಂದಾಗಿರುವ ಕೇಂದ್ರ ಸರ್ಕಾರವು ಎಲ್ಲಾ ಹದಿಹರೆಯದ ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆ ತರಬೇತಿಗಳನ್ನು ನೀಡುವ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಯೋಚಿಸಿದೆ. ಸರ್ಕಾರವು ನಡೆಸುವ ಎಲ್ಲಾ ಶಿಶುಪಾಲನಾ ಸಂಸ್ಥೆಗಳು, ಸ್ವಧಾರ್ ಗೃಹ ( ಮಹಿಳೆಯರ ಆಶ್ರಯ ತಾಣ) ಸೇರಿದಂತೆ ಹಲವೆಡೆಗಳಲ್ಲಿ ಆತ್ಮರಕ್ಷಣಾ ತರಬೇತಿಯನ್ನು ಆರಂಭಿಸಲು ನಿರ್ಧರಿಸಲಾಗಿದೆ.
ಇನ್ನು ಇದರ ಜೊತೆಯಲ್ಲಿ ರಾಷ್ಟ್ರೀಯ ತುರ್ತು ಸಂಖ್ಯೆ 112ನ್ನು ಮಹಿಳಾ ಸಹಾಯವಾಣಿ 181ನೊಂದಿಗೆ ಲಿಂಕ್ ಮಾಡಲು ನಿರ್ಧರಿಸಲಾಗಿದೆ. ಈ ಎರಡು ಸಹಾಯವಾಣಿಗಳಲ್ಲಿ ಯಾವುದಕ್ಕೆ ಕರೆ ಮಾಡಿದರೂ ಸಹ ಮಹಿಳೆಯರಿಗೆ ಸಹಾಯ ಮಾಡುವ ಕೆಲಸವನ್ನೇ ಮಾಡಲಾಗುತ್ತದೆ. ಮಹಿಳೆಯರು 112ಗೆ ಕರೆ ಮಾಡಿದರೆ ಈ ಕರೆಯನ್ನು 181ಗೆ ವರ್ಗಾಯಿಸಲಾಗುತ್ತದೆ. 181ಗೆ ಕರೆ ಮಾಡಿದರೆ ಅವಶ್ಯಕತೆಗಳನ್ನು ನೋಡಿಕೊಂಡು 112ಗೆ ವರ್ಗಾಯಿಸುವ ಕೆಲಸವನ್ನು ಮಾಡಲಾಗುತ್ತದೆ.
ದೆಹಲಿಯ ವಿಜ್ಞಾನ ಭವನದಲ್ಲಿ ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಸಹಯೋಗದಲ್ಲಿ ಸಚಿವಾಲಯವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಸುರಕ್ಷತೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಸರ್ಕಾರದ ದೃಷ್ಟಿಕೋನಗಳ ಬಗ್ಗೆ ಮಾಹಿತಿ ನೀಡಿದರು. ಹಿಂಸೆ ಮತ್ತು ಕಿರುಕುಳದಿಂದ ತಮ್ಮನ್ನು ಮತ್ತು ಇತರರನ್ನು ರಕ್ಷಿಸಿಕೊಳ್ಳಲು ಮಹಿಳೆಯರ ಆತ್ಮವಿಶ್ವಾಸವನ್ನು ಹೆಚ್ಚಿಸುವುದೇ ಕೇಂದ್ರದ ಗುರಿ ಎಂದು ಹೇಳಿದರು.