ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಕ್ಕೆ ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ನಯ್ಯ ಲಾಲ್ ಎಂಬವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಹಾಡಹಗಲೇ ಈ ಹತ್ಯೆಯನ್ನು ಮಾಡಿದ್ದ ಇಸ್ಲಾಂ ಮೂಲಭೂತವಾದಿಗಳು ಇದರ ವಿಡಿಯೋವನ್ನು ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ವೈಶಾಚಿಕತೆ ಮೆರೆದಿದ್ದರು. ಈ ಘಟನೆ ನಡೆದ ಮರುದಿನವೇ ಇಬ್ಬರು ಆರೋಪಿಗಳನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದರು.
ಕನ್ನಯ್ಯ ಲಾಲ್ ಅವರ ಹತ್ಯೆಯಿಂದಾಗಿ ಕುಟುಂಬ ಅನಾಥವಾಗಿತ್ತು. ಕುಟುಂಬದಲ್ಲಿ ಇವರೊಬ್ಬರೇ ದುಡಿಯುವ ವ್ಯಕ್ತಿಯಾಗಿದ್ದರಿಂದ ಮುಂದೇನು ಎಂಬ ಚಿಂತೆಯಲ್ಲಿದ್ದ ಪತ್ನಿ, ಪುತ್ರರಿಗೆ ನೆರವಾಗಲು ಮುಂದಾಗಿದ್ದ ಸಾರ್ವಜನಿಕರು ಒಂದು ಕೋಟಿ ರೂಪಾಯಿಗಳ ದೇಣಿಗೆ ಸಂಗ್ರಹಿಸಿ ನೀಡಿದ್ದರು.
ಇದೀಗ ರಾಜಸ್ಥಾನ ಸರ್ಕಾರ ಮತ್ತೊಂದು ಮಹತ್ವದ ತೀರ್ಮಾನ ಕೈಗೊಂಡಿದ್ದು, ಕನ್ನಯ್ಯ ಲಾಲ್ ಅವರ ಇಬ್ಬರು ಪುತ್ರರಿಗೆ ಸರ್ಕಾರಿ ನೌಕರಿ ನೀಡಲು ನಿರ್ಧರಿಸಲಾಗಿದೆ. ಕನ್ನಯ್ಯ ಲಾಲ್ ಪುತ್ರರಾದ ಯಶ್ ಹಾಗೂ ತರುಣ್ ಅವರಿಗೆ ನೌಕರಿ ನೀಡಲು ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.