ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ನೀಡುವ ಹೆಚ್ಚುವರಿ 5ಕೆಜಿ ಅಕ್ಕಿ ಬದಲಾಗಿ ಹಣ ಹಾಕುವುದಾಗಿ ಹೇಳಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಸರ್ಕಾರಕ್ಕೆ ಅಕ್ಕಿ ಕೊಡಲಾಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈಗ ಅಕ್ಕಿ ಬದಲು ಹಣ ಕೊಡುವುದಾಗಿ ಹೇಳುತ್ತಿದ್ದಾರೆ. ಹಣ ನೀಡುವ ಡೋಂಗಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಚುನಾವಣೆಗೂ ಮುನ್ನ ಕಾಂಗ್ರೆಸ್ ನಾಯಕರು 10 ಕೆಜಿ ಅಕ್ಕಿ ಕೊಡುವುದಾಗಿ ಭರವಸೆ ಕೊಟ್ಟಿದ್ದರು. ಕೇಂದ್ರ ಸರ್ಕಾರದ್ದೂ ಸೇರಿದಂತೆ ಒಟ್ಟು 15 ಕೆಜಿ ಅಕ್ಕಿ ಕೊಡಬೇಕಿತ್ತು. ಈಗ ರಾಜ್ಯ ಸರ್ಕಾರ ಅಕ್ಕಿ ಬದಲು ಹಣ ಹಾಕಲು ಹೊರಟಿದೆ. ಹಣ ಏನು ತಿನ್ನಲು ಆಗುತ್ತಾ? ಎಂದು ಪ್ರಶ್ನಿಸಿದ್ದಾರೆ.