ಮೈಸೂರು: ಬಿಜೆಪಿಯಿಂದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವವನ್ನು ರಾಜಕೀಯಕರಣ ಮಾಡಲಾಗುತ್ತಿದೆ. ಹರ್ ಘರ್ ತಿರಂಗಾವನ್ನು ವಿರೋಧಿಸಿದವರು ಯಾರು ? ದೇಶದ ತ್ರಿವರ್ಣಧ್ವಜವನ್ನು ಆರ್ ಎಸ್ ಎಸ್ ನವರು, ಸಾವರ್ಕರ್ ವಿರೋಧಿಸಿದರು. ಸಂವಿಧಾನ, ರಾಷ್ಟ್ರಗೀತೆ, ರಾಷ್ಟ್ರಧ್ವಜದ ಬಗ್ಗೆ ಅವರಿಗೆ ನಂಬಿಕೆಯೇ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯೋತ್ಸವದಲ್ಲಿ ಬಿಜೆಪಿಯವರ ಕೊಡುಗೆ ಶೂನ್ಯ. ಸ್ವಾತಂತ್ರ್ಯಕ್ಕಾಗಿ ಹೆಡ್ಗೇವಾರ್ ಜೈಲಿಗೆ ಹೋಗಿದ್ರಾ ? ಬಿಜೆಪಿಯ ಯಾವ ನಾಯಕರು ಸ್ವಾತಂತ್ರ್ಯ ಹೋರಾಟ ಮಾಡಿದ್ದರು ? ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ವಿಧಾನಸಭಾ ಚುನಾವಣೆ ಕ್ಷೇತ್ರ ಆಯ್ಕೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಎಲ್ಲಿಂದ ಸ್ಪರ್ಧಿಸಬೇಕು ಎಂದು ಇನ್ನೂ ಅಂತಿಮ ತೀರ್ಮಾನ ಮಾಡಿಲ್ಲ, ವರುಣಾ, ಚಿಂತಾಮಣಿಗೆ ಹೋಗಿದ್ದೆ, ಚಾಮುಂಡೇಶ್ವರಿ ಕ್ಷೇತ್ರಕ್ಕೂ ಹೋಗಿದ್ದೆ ಎಲ್ಲಿಯೇ ಹೋದರೂ ಅಲ್ಲಿಂದ ಸ್ಪರ್ಧಿಸ್ತೀರಾ? ಇಲ್ಲಿಂದ ಸ್ಪರ್ಧಿಸುತ್ತೀರಾ ಎಂದು ಕೇಳುತ್ತಾರೆ. ಇನ್ನೂ ಕ್ಷೇತ್ರದ ಬಗ್ಗೆ ನಿರ್ಧಾರ ಮಾಡಿಲ್ಲ, ಮಾಡಿದ ಮೇಲೆ ಹೇಳುತ್ತೇನೆ ಎಂದರು.