ಬೆಂಗಳೂರು: ಸ್ವಂತ ಜಿಲ್ಲೆ ಉಸ್ತುವಾರಿ ಕೈತಪ್ಪಿರುವುದಕ್ಕೆ ಸಚಿವ ಡಾ.ಕೆ. ಸುಧಾಕರ್ ಹಾಗೂ ಎಂಟಿಬಿ ನಾಗರಾಜ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ದಿಡೀರ್ ಬದಲಾವಣೆ ಬೇಸರ ತಂದಿದೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಇದು ನಮ್ಮ ಪಕ್ಷದ ಆಂತರಿಕ ವಿಚಾರ. ಹಾಗಾಗಿ ನಾನು ಬಹಿರಂಗವಾಗಿ ಏನೂ ಹೇಳಲಾಗದು. ಹೈಕಮಾಂಡ್ ಹಾಗೂ ನಮ್ಮ ಸಿಎಂ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧ. ಆದರೆ ನಮ್ಮ ಆಲೋಚನೆಗಳನ್ನು, ಸಲಹೆಗಳನ್ನು ನಾವು ಹಂಚಿಕೊಳ್ಳುತ್ತೇವೆ. ಸಿಎಂ ಬಳಿ ನಮ್ಮ ವಿಚಾರಗಳನ್ನು ಹೇಳಿಕೊಳ್ಳುತ್ತೇವೆ. ಅದರ ಮೇಲೆ ತೀರ್ಮಾನ ಅವರಿಗೆ ಬಿಟ್ಟದ್ದು ಎಂದು ತಿಳಿಸಿದ್ದಾರೆ.
ಇದೇ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿಯಾಗಿದ್ದ ಸಚಿವ ಎಂಟಿಬಿ ನಾಗರಾಜ್ ಅವರಿಗೆ ಚಿಕ್ಕಬಳ್ಳಾಪುರ ಜಿಲ್ಲೆ ಉಸ್ತುವಾರಿ ಜವಾಬ್ದಾರಿ ನೀಡಲಾಗಿದ್ದು, ಇಷ್ಟು ದಿನವಿದ್ದ ನಮ್ಮ ಜಿಲ್ಲಾ ಉಸ್ತುವಾರಿ ಅದಲುಬದಲು ಮಾಡಿರುವುದು ಬೇಸರವಾಗಿದೆ. ಇದರಿಂದ ನಮಗೆ ಸಮಸ್ಯೆಯಾಗುತ್ತದೆ ಎಂದು ಹೇಳಿದ್ದಾರೆ.
ಈಗಾಗಲೇ ಸಚಿವ ಸುಧಾಕರ್ ಬಳಿಯೂ ಮಾತನಾಡಿರುವ ಎಂಟಿಬಿ, ಉಸ್ತುವಾರಿ ಅದಲುಬದಲು ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿರುವ ಎಂಟಿಬಿ ನಾಗರಾಜ್, ತಮಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿಯನ್ನೇ ವಾಪಸ್ ನೀಡುವಂತೆ ಮನವಿ ಮಾಡಿದ್ದಾರೆ.
ಈ ನಡುವೆ ಎಂಟಿಬಿ ನಾಗರಾಜ್ ಬೆಂಬಲಿಗರು ಕೂಡ ಸಚಿವರ ಉಸ್ತುವಾರಿ ಬದಲಾವಣೆಯಾಗಿರುವುದಕ್ಕೆ ಸಿಎಂ ಬೊಮ್ಮಾಯಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಜವಾಬ್ದಾರಿ ವಾಪಸ್ ನೀಡುವಂತೆ ಆಗ್ರಹಿಸಿದ್ದಾರೆ.