ಹಾಸನ: ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದು ಹೇಳಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಲಹೆಯೊಂದನ್ನು ನೀಡಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ. ರವಿ, ನಮ್ಮ ರಾಜ್ಯದವರು 50 ವರ್ಷಗಳ ನಂತರ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಾನು ಅವರಿಗೆ ಕಿರಿಯನಾಗಿ ಒಂದು ಮಾತು ಹೇಳುತ್ತೇನೆ. ನೀವು ರಿಮೋಟ್ ಪರಿದಿಯಿಂದ ಹೊರಗೆ ಹೋಗುವ ಪ್ರಯತ್ನ ಮಾಡಬೇಡಿ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ರಿಮೋಟ್ ಪರಿದಿಯೊಳಗೇ ಇರಿ. ಹಾಗಿದ್ದರೆ ಮಾತ್ರ ನಿಮ್ಮನ್ನು ಉಳಿಸುತ್ತಾರೆ. ನೀವು ಸ್ವಂತಿಕೆ ತೋರಿಸುವ ಪ್ರಯತ್ನ ಮಾಡಿದರೆ ಆ ಕ್ಷಣ ನಿಮಗೆ ಅಪಮಾನ ಮಾಡಿ ಕಿತ್ತು ಹಾಕುತ್ತಾರೆ ಎಂದರು.
ಈ ಹಿಂದೆ ನಿಜಲಿಂಗಪ್ಪ, ಸೀತಾರಾಂ ಕೇಸರಿ ಅವರಿಗೆ ಅದೇ ರೀತಿ ಆಯ್ತು. ಯಾರು ಸ್ವತಂತ್ರ ಅಸ್ತಿತ್ವ ತೋರಿಸಲು ಯತ್ನಿಸುತ್ತಾರೋ ಅವರನ್ನು ಕಾಂಗ್ರೆಸ್ ನ ಸೋನಿಯಾಜಿ, ರಾಹುಲ್ ಜಿ ಸಹಿಸಲ್ಲ. ಸ್ವತಂತ್ರ ಅಸ್ತಿತ್ವ ಮರೆತು ಇದ್ದರೆ ಇರುವಷ್ಟು ದಿನ ಅಧಿಕಾರದಲ್ಲಿರಬಹುದು ಎಂದು ಹೇಳಿದರು.
ಕಾಂಗ್ರೆಸ್ ಮುಳುಗುವ ಹಡಗು. ಮುಳುಗುವ ಹಡಗಿಗೆ ಖರ್ಗೆ ಕ್ಯಾಪ್ಟನ್ ಆಗಿದ್ದಾರೆ. ಹಡಗು ಉಳಿಸುವುದು ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಲೈಫ್ ಜಾಕೇಟ್ ಹಾಕಿಕೊಂಡರೆ ಅವರು ಉಳಿಯಬಹುದು. ಹಡಗು ಉಳಿಯಲ್ಲ. ಇಷ್ಟು ಮುಂದಾಲೋಚನೆ, ಅನುಭವ ಖಂಡಿತವಾಗಿಯೂ ಖರ್ಗೆ ಅವರಿಗೆ ಇದೆ ಎಂದು ಭಾವಿಸುತ್ತೇನೆ ಎಂದು ಟಾಂಗ್ ನೀಡಿದ್ದಾರೆ.