ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್, ಕನ್ಸರ್ವೇಟಿವ್ ಪಕ್ಷದ ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ತಾವು ಹಿಂದೆ ಸರಿದಿರುವುದಾಗಿ ಘೋಷಿಸಿದ್ದು, ಹೀಗಾಗಿ ಭಾರತೀಯ ಮೂಲದ ರಿಷಿ ಸುನಾಕ್ ಬ್ರಿಟನ್ ಮುಂದಿನ ಪ್ರಧಾನಿಯಾಗುವುದು ಬಹುತೇಕ ಖಚಿತವಾಗಿದೆ.
ಕನ್ಸರ್ವೇಟಿವ್ ಪಕ್ಷದ ಅಧ್ಯಕ್ಷರಾಗುವವರು ಪ್ರಧಾನಿಯಾಗಲಿದ್ದು, ರಿಷಿ ಸುನಾಕ್ ಈಗಾಗಲೇ ತಾವು ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ರಿಷಿ ಸುನಾಕ್ ಅವರಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬೋರಿಸ್ ಜಾನ್ಸನ್ ಕಣದಿಂದ ಹಿಂದೆ ಸರಿದಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಮೊದಲು ಬೋರಿಸ್ ಜಾನ್ಸನ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ರಿಷಿ ಸುನಾಕ್, ಲಿಜ್ ಟ್ರಸ್ ಎದುರು ಪರಾಭವಗೊಂಡಿದ್ದರು. ಆದರೆ ಹದಗೆಟ್ಟಿರುವ ಬ್ರಿಟನ್ ಆರ್ಥಿಕ ಪರಿಸ್ಥಿತಿಯನ್ನು ತಹಬದಿಗೆ ತರಲು ಲಿಜ್ ಟ್ರಸ್ ವಿಫಲರಾದ ಕಾರಣ ಕೇವಲ 45 ದಿನಗಳಲ್ಲಿಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಹೀಗಾಗಿ ಮತ್ತೆ ಚುನಾವಣೆ ನಡೆಯುತ್ತಿದ್ದು, ತಾವು ಕಣಕ್ಕಿಳಿಯುವುದಾಗಿ ರಿಷಿ ಸುನಾಕ್ ಈಗಾಗಲೇ ಘೋಷಿಸಿದ್ದಾರೆ. ಅಲ್ಲದೆ ತಾವು ಆಯ್ಕೆಯಾದರೆ ಬ್ರಿಟನ್ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ವಿಶ್ವಾಸ ಹೊಂದಿರುವುದಾಗಿ ತಿಳಿಸಿದ್ದಾರೆ.