ಲ್ಯುಕೇಮಿಯಾ ಹೊಂದಿರುವ ಅಮೆರಿಕಾ ಮೂಲದ ರೋಗಿಯೊಬ್ಬರು ಏಡ್ಸ್‌ಗೆ ಕಾರಣವಾಗುವ ವೈರಸ್‌ಗೆ ನೈಸರ್ಗಿಕವಾಗಿ ನಿರೋಧಕವಾಗಿರುವ ದಾನಿಯಿಂದ ಕಾಂಡಕೋಶ ಕಸಿ ಪಡೆದ ನಂತರ ಎಚ್‌ಐವಿಯಿಂದ ಗುಣಮುಖರಾಗಿದ್ದಾರೆ. ಈ ಮೂಲಕ ಗುಣಮುಖರಾದ ಮೊದಲ ಮಹಿಳೆ ಮತ್ತು ಮೂರನೇ ವ್ಯಕ್ತಿಯಾಗಿದ್ದಾರೆ ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ.
ಮಹಿಳೆಯ ತೀವ್ರವಾದ ಮೈಲೋಯ್ಡ್ ಲ್ಯುಕೇಮಿಯಾಕ್ಕೆ ಚಿಕಿತ್ಸೆ ನೀಡಲು ಹೊಕ್ಕುಳ ಬಳ್ಳಿಯ ರಕ್ತವನ್ನು ಚಿಕಿತ್ಸೆಯಲ್ಲಿ ಅಳವಡಿಸಲಾಗಿದೆ. ಇದು ಹೆಚ್ಚಿನ ಜನರಿಗೆ ಚಿಕಿತ್ಸೆಯನ್ನು ಲಭ್ಯವಾಗುವಂತೆ ಮಾಡುವ ಹೊಸ ವಿಧಾನವಾಗಿದೆ. ಮಹಿಳೆಯು 14 ತಿಂಗಳುಗಳವರೆಗೆ ಯಾವುದೇ ಪ್ರಬಲ ಎಚ್ಐವಿ ಚಿಕಿತ್ಸೆಗಳ ಅಗತ್ಯವಿಲ್ಲದೇ ವೈರಸ್ನಿಂದ ಮುಕ್ತಳಾಗಿದ್ದಾಳೆ. ಇದನ್ನು ಆಂಟಿರೆಟ್ರೋವೈರಲ್ ಚಿಕಿತ್ಸೆ ಎಂದು ಕರೆಯಲಾಗುತ್ತದೆ.
ಕ್ಯಾಲಿಫೋರ್ನಿಯಾ ಲಾಸ್ ಏಂಜಲೀಸ್ ವಿಶ್ವವಿದ್ಯಾಲಯದ ಡಾ. ವೈವೊನ್ನೆ ಬ್ರೈಸನ್ ಮತ್ತು ಬಾಲ್ಟಿಮೋರ್‌ನಲ್ಲಿರುವ ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಡಾ. ಡೆಬೊರಾ ಪರ್ಸೌಡ್ ನೇತೃತ್ವದ ವೈದ್ಯರ ತಂಡದ ಅಧ್ಯಯನದ ಭಾಗವಾಗಿದೆ.
ಈ ಪ್ರಯೋಗದಲ್ಲಿ, ರೋಗಿಗಳು ಮೊದಲಿಗೆ ಕ್ಯಾನ್ಸರ್ ನ ಪ್ರತಿರಕ್ಷಣಾ ಕೋಶಗಳನ್ನು ಕೊಲ್ಲಲು ಕೀಮೋಥೆರಪಿಗೆ ಒಳಗಾಗುತ್ತಾರೆ. ವೈದ್ಯರು ನಂತರ ನಿರ್ದಿಷ್ಟ ಆನುವಂಶಿಕ ರೂಪಾಂತರ ಹೊಂದಿರುವ ವ್ಯಕ್ತಿಗಳಿಂದ ಕಾಂಡಕೋಶಗಳನ್ನು ಕಸಿ ಮಾಡುತ್ತಾರೆ. ಈ ವ್ಯಕ್ತಿಗಳು ನಂತರ ಎಚ್ಐವಿ ನಿರೋಧಕ ಪ್ರತಿರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಾರೆ ಎಂಬುದು ವಿಜ್ಞಾನಿಗಳ ಅಭಿಮತವಾಗಿದೆ.