ಬೆಲೆ ಏರಿಕೆಯಿಂದ ಜನಸಾಮಾನ್ಯರು ಈಗಾಗಲೇ ಕಂಗೆಟ್ಟು ಹೋಗಿದ್ದಾರೆ. ಇಂದಿನ ದಿನಮಾನಗಳಲ್ಲಿ ಜೀವನ ನಡೆಸುವುದೇ ದುಸ್ತರವಾಗಿರುವಾಗ ಈವರೆಗೆ GST ವಿನಾಯಿತಿ ಪಡೆದಿದ್ದ ಪ್ಯಾಕ್ ಮಾಡಲಾದ ಆಹಾರ ವಸ್ತುಗಳಿಗೆ ಸೋಮವಾರದಿಂದ GST ಅನ್ವಯವಾಗಲಿದ್ದು, ಇದರಿಂದ ದುನಿಯಾ ಮತ್ತಷ್ಟು ದುಬಾರಿಯಾಗಲಿದೆ.
ಪ್ಯಾಕ್ ಮಾಡಿ ಲೇಬಲ್ ಇರುವ ಮೊಸರು, ಲಸ್ಸಿ, ಮಜ್ಜಿಗೆ, ಬೆಣ್ಣೆ ಹಾಲು ಪನ್ನೀರ್ ಮಾತ್ರವಲ್ಲದೆ ಲೇಬಲ್ ಮಾಡಿದ ಮಾಂಸ, ಮೀನು, ಜೇನುತುಪ್ಪ, ಒಣಗಿದ ದ್ವಿದಳ ಧಾನ್ಯಗಳು, ಗೋಧಿ ಮತ್ತು ಇತರ ಧಾನ್ಯಗಳಿಗೆ ಶೇಕಡ 5ರಷ್ಟು ಜಿ.ಎಸ್.ಟಿ. ಅನ್ವಯವಾಗಲಿದೆ. ಬೆಲ್ಲ, ಮಂಡಕ್ಕಿ, ಸಾವಯವ ಗೊಬ್ಬರ ಸೇರಿದಂತೆ ಹಲವು ವಸ್ತುಗಳ ಮೇಲೂ ಶೇ.5 ರಷ್ಟು ಜಿ.ಎಸ್.ಟಿ. ಇರುತ್ತದೆ.
ಹೋಟೆಲ್ ವಾಸವು ಸಹ ಇನ್ನು ಮುಂದೆ ದುಬಾರಿಯಾಗಲಿದ್ದು, ಈವರೆಗೆ ಜಿ.ಎಸ್.ಟಿ. ವಿನಾಯಿತಿ ಹೊಂದಿದ್ದ ಸಾವಿರ ರೂ. ಒಳಗಿನ ಬಾಡಿಗೆ ಹೋಟೆಲ್ ಕೊಠಡಿಗಳಿಗೆ ಇನ್ನು ಮುಂದೆ ಶೇಕಡ 12ರಷ್ಟು ತೆರಿಗೆ ಹೊರೆ ಬೀಳಲಿದೆ. ರೈತರಿಗೂ ಸಹ ಸೋಮವಾರದಿಂದ ಮತ್ತಷ್ಟು ಹೊರೆಯಾಗಲಿದ್ದು ನೀರು ಎತ್ತುವ ಪಂಪ್, ಆಳವಾದ ಕೊಳವೆ ಬಾವಿಗೆ ಅಳವಡಿಸುವ ಟರ್ಬೈನ್ ಪಂಪ್, ಸಬ್ಮರ್ಸಿಬಲ್ ಪಂಪ್ ಮೊದಲಾದವುಗಳ ಜಿ.ಎಸ್.ಟಿ. ಶೇಕಡ 12 ರಿಂದ 18ಕ್ಕೆ ಹೆಚ್ಚಳ ಮಾಡಲಾಗಿದೆ.