ಖ್ಯಾತ ಉದ್ಯಮಿ ಹಾಗೂ ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ, ಭಾನುವಾರದಂದು ಮಹಾರಾಷ್ಟ್ರದ ಪಾಲ್ಗಾರ್ ಜಿಲ್ಲೆಯ ಸೂರ್ಯ ನದಿ ಸೇತುವೆ ಮೇಲೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಹಮದಾಬಾದ್ ನಿಂದ ಮುಂಬೈಗೆ ಸ್ನೇಹಿತರ ಜೊತೆ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ವಾಪಸ್ ಆಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿತ್ತು.
ಇದೀಗ ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಮಹತ್ವದ ಅಂಶ ಬಹಿರಂಗವಾಗಿದ್ದು, ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಸೈರಸ್ ಮಿಸ್ತ್ರಿ ಹಾಗೂ ಅವರ ಸ್ನೇಹಿತ ಜಹಂಗೀರ್ ಪಾಂಡೋಲೆ ಸೀಟ್ ಬೆಲ್ಟ್ ಧರಿಸಿರಲಿಲ್ಲ ಎನ್ನಲಾಗಿದ್ದು, ಇದರ ಪರಿಣಾಮ ಅಪಘಾತವಾದಾಗ ಸೆನ್ಸರ್ ಕೈಕೊಟ್ಟು ಏರ್ ಬ್ಯಾಗ್ ತೆರೆದುಕೊಳ್ಳದೆ ಇರುವುದೇ ಇವರುಗಳ ಸಾವಿಗೆ ಕಾರಣ ಎಂದು ಹೇಳಲಾಗಿದೆ.
ಕಾರನ್ನು ಮುಂಬೈನ ಖ್ಯಾತ ಸ್ತ್ರೀ ರೋಗ ತಜ್ಞೆ ಅನಾಹಿತ ಪಾಂಡೋಲೆ ಚಾಲನೆ ಮಾಡುತ್ತಿದ್ದು, ಅವರ ಪಕ್ಕದಲ್ಲಿ ಪತಿ ಧರಿಯೋಸ್ ಪಾಂಡೋಲೆ ಕುಳಿತಿದ್ದರು. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಕಾರು 130 ಕಿಮೀ ವೇಗದಲ್ಲಿ ಚಲಿಸುತ್ತಿತ್ತು ಎನ್ನಲಾಗಿದ್ದು, ಹೀಗಾಗಿ ಇದರ ತೀವ್ರತೆಗೆ ಹಿಂಬದಿ ಕುಳಿತಿದ್ದ ಇಬ್ಬರೂ ಸಾವನ್ನಪ್ಪಿ ಮುಂಬದಿ ಕುಳಿತಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ಪ್ರಾಥಮಿಕ ವರದಿ ತಿಳಿಸಿದೆ. ಮೇಲ್ನೋಟಕ್ಕೆ ಸೀಟ್ ಬೆಲ್ಟ್ ಧರಿಸದೆ ಇರುವುದೇ ಸೈರಸ್ ಮಿಸ್ತ್ರಿ ಸಾವಿಗೆ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.