ಭಾರತೀಯ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಯ ನೇಮಕಾತಿ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಯಾಗ್ತಿದೆ. ಹೊಸ ನಿಯಮದ ಪ್ರಕಾರ ನೇಮಕಾತಿಯಾಗಿ 4 ವರ್ಷಗಳ ಬಳಿಕ ಎಲ್ಲಾ ಯೋಧರನ್ನು ಸೇವೆಯಿಂದ ಬಿಡುಗಡೆ ಮಾಡಲಾಗುವುದು.
ನೇಮಕಾತಿಯಾಗಿ ಒಂದು ತಿಂಗಳ ಬಳಿಕ ಶೇ.25ರಷ್ಟು ಸೈನಿಕರ ಸೇವೆಯನ್ನು ಪೂರ್ಣ ಅವಧಿಗೆ ಕಡ್ಡಾಯ ಮಾಡಲಾಗಿದೆ. ಅಗ್ನಿಪಥ್ ಯೋಜನೆ ಅಡಿಯಲ್ಲಿ ಈ ಬದಲಾವಣೆಗಳನ್ನು ತರಲಾಗಿದೆ. ಈ ಆಮೂಲಾಗ್ರ ಬದಲಾವಣೆಗಳಿಗೆ ಸಂಬಂಧಪಟ್ಟಂತೆ ಸೇನೆಯ ಹಿರಿಯ ಅಧಿಕಾರಿಗಳು ಈಗಾಗ್ಲೇ ಚರ್ಚಿಸಿದ್ದಾರೆ.
ಅತಿ ಶೀಘ್ರದಲ್ಲಿ ಭಾರತೀಯ ಯೋಧರು ಈ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಈ ಯೋಜನೆಯಿಂದ ಸೈನಿಕರಿಗೆ ನೆರವು ಸಿಗುವ ನಿರೀಕ್ಷೆ ಇದೆ. ಆರಂಭದಲ್ಲಿ 3 ವರ್ಷಗಳ ಕ್ರಿಯಾಶೀಲ ಸೇವೆಯ ಬಳಿಕ ಯೋಧರ ಬಿಡುಗಡೆಗೆ ಅನುಮತಿಸಲು ಚಿಂತನೆ ನಡೆದಿತ್ತು. ನಂತರ ಈ ಅವಧಿಯನ್ನು 5 ವರ್ಷಗಳಿಗೆ ಏರಿಸಲು ಯೋಜಿಸಲಾಗಿತ್ತು.
ಸಾಕಷ್ಟು ಚರ್ಚೆಗಳ ಬಳಿಕ ಈ ಅವಧಿಯನ್ನು 4 ವರ್ಷಕ್ಕೆ ನಿಗದಿ ಮಾಡಲಾಗಿದೆ. ಈ ನೇಮಕಾತಿ ನಿಯಮಗಳ ಬದಲಾವಣೆಗಳಿಂದ ಯೋಧರಿಗೆ ಅನುಕೂಲವಾಗುವ ಜೊತೆಗೆ ಹಣ ಕೂಡ ಉಳಿತಾಯವಾಗುವ ನಿರೀಕ್ಷೆ ಇದೆ. ಕಳೆದ 2 ವರ್ಷಗಳಿಂದ ಬಹುತೇಕ ನಿಂತೇ ಹೋಗಿದ್ದ ನೇಮಕಾತಿ ಪ್ರಕ್ರಿಯೆಗೆ ಚಾಲನೆ ಸಿಕ್ಕಂತಾಗಿದೆ.
ಪರಿಣಾಮ ಅನಿಶ್ಚಿತತೆಗಳಿಂದ ಉದ್ವೇಗ ಮತ್ತು ಖಿನ್ನತೆಗೆ ಒಳಗಾಗುತ್ತಿದ್ದ ಸೈನಿಕರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡಬಹುದು. ನೇಮಕಾತಿ ವಿಳಂಬವನ್ನು ವಿರೋಧಿಸಿ ಪಂಜಾಬ್ ಹಾಗೂ ಹರಿಯಾಣದಲ್ಲಿ ಪ್ರತಿಭಟನೆಗಳು ಕೂಡ ನಡೆದಿದ್ದವು. ಒತ್ತಡ ತಾಳಲಾರದೆ ಕೆಲವು ಸೈನಿಕರು ಆತ್ಮಹತ್ಯೆಗೂ ಶರಣಾಗಿದ್ದರು.