ಬೆಂಗಳೂರು: ವೀಕೆಂಡ್ ಕರ್ಫ್ಯೂ ಸದ್ಯಕ್ಕೆ ವಾಪಸ್ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕಠಿಣ ನಿಯಮಗಳನ್ನು ಎಲ್ಲರೂ ಪಾಲಿಸಬೇಕು ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಮೇಕೆದಾಟು ವಿಚಾರವಾಗಿ ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಸೂರ್ಯ, ಚಂದ್ರ ನಾಟಕದ ಡೈಲಾಗ್ ಗಳಿಗೆ ಉತ್ತರಿಸುವ ಅಗತ್ಯವೇ ಇಲ್ಲ. ಕಾನೂನು ಎಲ್ಲರಿಗೂ ಒಂದೇ ಹಾಗಾಗಿ ಕೋವಿಡ್ ನಿಯಮಗಳನ್ನು ಎಲ್ಲರೂ ಪಾಲಿಸಲೇಬೇಕು ಎಂದರು.
ಕೆಪಿಸಿಸಿ ಅಧ್ಯಕ್ಷರನ್ನು ಬಿಡಿ ಅವರು ನಮ್ಮ ಸ್ನೇಹಿತರು ಎಂದುಕೊಳ್ಳೋಣ. ಆದರೆ ಸಿದ್ದರಾಮಣ್ಣ ಓರ್ವ ಮುಖ್ಯಮಂತ್ರಿಯಾಗಿದ್ದವರು. ಕಾನೂನು ಸುವ್ಯವಸ್ಥೆ ಮುಖ್ಯಸ್ಥರೂ ಕೂಡ ಆಗಿದ್ದರು. ಅವರು ಕಾನೂನಿಗೆ, ಈಗಿರುವ ಕೋವಿಡ್ ನಿಯಮಾವಳಿಗಳಿಗೆ ಗೌರವ ಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಸಧ್ಯದ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಮುಂದಿನ ವಾರ ಸ್ಥಿತಿಗತಿ ನೋಡಿಕೊಂಡು ತೀರ್ಮಾನ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.