ಬೆಂಗಳೂರು ನಗರದಲ್ಲಿ ಮಳೆ ಅನಾಹುತದಿಂದಾಗಿ ಬ್ರಾಂಡ್ ಬೆಂಗಳೂರು ಹೆಸರಿಗೆ ಆತಂಕ ಸೃಷ್ಟಿಯಾಗಿದೆ. ಈ ನಿಟ್ಟಿನಲ್ಲಿ ದಿಟ್ಟ ಕ್ರಮ ಕೈಗೊಳ್ಳುವಂತೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಮಾಜಿ ಸಿಎಂ ಎಸ್.ಎಂ. ಕೃಷ್ಣ ಬರೆದಿರುವ ಪತ್ರ ವಿಚಾರಕ್ಕೆ ಟಾಂಗ್ ನೀಡಿರುವ ಹೆಚ್.ಡಿ. ಕುಮಾರಸ್ವಾಮಿ ಸೂಟು ಬೂಟು ಹಾಕಿಕೊಂಡರೆ ಬ್ರಾಂಡ್ ಬೆಂಗಳೂರು ಆಗಲ್ಲ ಎಂದು ತಿರುಗೇಟು ನೀಡಿದ್ದಾರೆ.
ಜೆ.ಪಿ. ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಎಸ್.ಎಂ. ಕೃಷ್ಣ ಕಾಲದಲ್ಲಿ ಬೆಂಗಳೂರಿಗೆ ಬ್ರಾಂಡ್ ಎಲ್ಲಿತ್ತು ? ದೇವೇಗೌಡರ ಕಾಲದಲ್ಲಿ ಬ್ರಾಂಡ್ ಬೆಂಗಳೂರು ಬಂದಿದ್ದು. ಬ್ರಾಂಡ್ ಬೆಂಗಳೂರು ಹೆಸರನ್ನು ಇವರು ಹೈಜಾಕ್ ಮಾಡಿದರು ಎಂದು ಕಿಡಿ ಕಾರಿದ್ದಾರೆ.
ರಾಜ್ಯದಲ್ಲಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮೊದಲೇ ಮುನ್ಸೂಚನೆ ನೀಡಿದ್ದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಜಿಲ್ಲೆಗಳಲ್ಲಿ ಅವಾಂತರ ಸೃಷ್ಟಿಯಾಗಿದೆ. ಬೆಂಗಳೂರಿನಲ್ಲಿ ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳು ಜಲಾವೃತವಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಸಿಎಂ ಬೊಮ್ಮಾಯಿ ಕಾಟಾಚಾರಕ್ಕೆ ನಗರ ಪ್ರದಕ್ಷಿಣೆ ಹಾಕುತ್ತಿದ್ದಾರೆ. ಸಿಟಿ ರೌಂಡ್ಸ್ ಕೇವಲ ಫೋಟೋಗೆ ಸೀಮಿತವಾಗಿದೆ. ರಾಜಕಾಲುವೆ ವಿಚಾರ ಏನಾಯ್ತು ? ಎಂದು ಪ್ರಶ್ನಿಸಿದ್ದಾರೆ.
ಮಳೆಯಿಂದ ಇಷ್ಟೆಲ್ಲ ಸಮಸ್ಯೆಗಳಾದರೂ ಮಹಾನಗರದ 7 ಸಚಿವರು ಇದುವರೆಗೂ ಶಾಸಕರ, ಅಧಿಕಾರಿಗಳ ಒಂದು ಸಭೆ ಕರೆದಿಲ್ಲ. ಹೊರಮಾವು ಪ್ರದೇಶಕ್ಕೆ ಹೋದ ಸಚಿವರು ಫೆಬ್ರವರಿಯಲ್ಲಿ ಸಮಸ್ಯೆ ಸರಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಬಜೆಟ್ ಅನುಷ್ಠಾನ, ಅನುದಾನ ತೆಗೆದುಕೊಂಡು ಹೋದ ಕಥೆ ಏನಾಯಿತು ? ರಾಜ್ಯ ಸರ್ಕಾರಕ್ಕೆ ಯಾರೂ ಹೇಳುವವರು ಕೇಳುವವರು ಇಲ್ಲದಾಗಿದೆ. ಮನಸ್ಸಿಗೆ ಬಂದಂತೆ ಸರ್ಕಾರ ನಡೆಸುತ್ತಿದ್ದಾರೆ. ರಾಜ್ಯದ ಜನತೆಗೆ ಏನು ಸಂದೇಶ ನೀಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.