ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವಿನ ವಾಕ್ಸಮರ ಮುಂದುವರೆದಿದ್ದು, ‘ಅಕ್ಕಿಭಾಗ್ಯ’ದ ಅಸಲಿಯತ್ತು ಏನು ಎಂಬುದನ್ನು ಸದನದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದೇನೆ. ಆದರೂ ನಿಮ್ಮ ಸುಳ್ಳಿನ ಜಪ ಮುಂದುವರೆದಿದೆ.
ಸತ್ಯ ಹೇಳಲು ಹಿಂಜರಿಕೆ-ಅಧೈರ್ಯ ಏಕೆ? ಸುಳ್ಳಿನ ಮೇಲಿರುವಷ್ಟು ನಿಷ್ಠೆ ಸತ್ಯದ ಮೇಲೆ ಯಾಕಿಲ್ಲ? ಎಂದು ಕುಮಾರಸ್ವಾಮಿ, ಸಿದ್ದರಾಮಯ್ಯರನ್ನು ಪ್ರಶ್ನಿಸಿದ್ದಾರೆ.
ಸಮ್ಮಿಶ್ರ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದೆ. ಅದಕ್ಕೂ ಮುನ್ನ ಬಜೆಟ್ ಮಂಡಿಸಿ ಚುನಾವಣೆಗೆ ಹೋದ ನೀವು ಎಷ್ಟು ಕೆಜಿ ಅಕ್ಕಿಗೆ ಹಣ ಇಟ್ಟಿದ್ದಿರಿ? 5 ಕೆಜಿಗೋ ಅಥವಾ 7 ಕೆಜಿಗೋ? ಸತ್ಯ ಹೇಳಲು ನಾಲಿಗೆ ತಡವರಿಸುತ್ತಿರುವುದೇಕೆ? ಎಂದು ಸರಣಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
ಮದುವೆಯಾಗುವುದಾಗಿ ನಂಬಿಸಿ ಯುವತಿ ಗರ್ಭಿಣಿಯಾದ ನಂತ್ರ ಕೈಕೊಟ್ಟ ಪೊಲೀಸ್…?
ಸಮ್ಮಿಶ್ರ ಸರ್ಕಾರದಲ್ಲಿ 5 ಕೆಜಿ ಅಕ್ಕಿ ನೀಡಲಾಯಿತು. ನಿಜ. 7 ಕೆಜಿ ಕೊಡಿ ಎಂದು ಬೊಬ್ಬೆ ಹೊಡೆದ ನೀವೇ ಹಣ ಇಟ್ಟಿದ್ದು 5 ಕೆಜಿಗೆ ಮಾತ್ರ. ಕುಮಾರಸ್ವಾಮಿ 7 ಕೆಜಿ ಅಕ್ಕಿಯನ್ನು 5 ಕೆಜಿಗೆ ಇಳಿಸಿದರು ಎಂದು ನಿರ್ಲಜ್ಜವಾಗಿ ಸುಳ್ಳು ಹೇಳುತ್ತಿದ್ದೀರಿ? ಪಾಪಪ್ರಜ್ಞೆ ಇಲ್ಲವೇ ನಿಮಗೆ? ಉಳಿದ 2 ಕೆಜಿ ಅಕ್ಕಿಗೆ ಹಣ ಎಲ್ಲಿತ್ತು? ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಚುನಾವಣೆಯಲ್ಲಿ ಮತ ಪಡೆಯುವ ದುರುದ್ದೇಶದಿಂದ ಜನರು ತಿನ್ನುವ ಅನ್ನದ ಜತೆಗೂ ರಾಜಕೀಯ ಮಾಡುತ್ತಿದ್ದೀರಿ. ಸುಳ್ಳಿನ ಶೂರ ಸಿದ್ದರಾಮಯ್ಯನವರೇ ಇನ್ನಾದರೂ ನಿಮ್ಮ ಸುಳ್ಳಿನ ‘ಸಿದ್ದಕಲೆ’ಗೆ ಕೊನೆ ಹಾಡಿ. ಸತ್ಯಕ್ಕೆ ಬೆನ್ನು ತಿರುಗಿಸಿ ಸದಾ ಸುಳ್ಳಿನ ಕಡೆಗೆ ಮುಖ ಮಾಡಿ ನಿಲ್ಲುವ ‘ಸಿದ್ದಹಸ್ತ’ರಿಗೆ ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ ಎಂದು ಕುಮಾರಸ್ವಾಮಿ ಹಿಗ್ಗಾ ಮುಗ್ಗಾ ಚಾಟಿ ಬೀಸಿದ್ದಾರೆ.