ಇಷ್ಟು ದಿನ ಕೋರ್ಟ್ ಕಲಾಪ ನೋಡಬೇಕು ಎಂದರೆ ಕೋರ್ಟ್ ಹಾಲ್ ನಲ್ಲಿ ನೋಡಬಹುದಿತ್ತು. ಆದರೆ ಇನ್ಮುಂದೆ ಹಾಗಲ್ಲ. ನೀವು ಕಲಾಪವನ್ನು ನೇರ ಪ್ರಸಾರದ ಮೂಲಕ ನೋಡಬಹುದಾಗಿದೆ. ಇಂಥಹದೊಂದು ಅವಕಾಶವನ್ನು ಸುಪ್ರೀಂ ಮಾಡಿಕೊಟ್ಟಿದೆ.
ಹೌದು, ಇತಿಹಾಸದಲ್ಲಿ ಮೊದಲ ಬಾರಿಗೆ ಇಂಥಹ ಅವಕಾಶ ದೇಶದಲ್ಲಿ ಸಿಗುತ್ತಿದೆ. ಇಂದಿನಿಂದ ಇದು ಪ್ರಾರಂಭವಾಗಿದೆ. ಇದರ ಭಾಗವಾಗಿ ನಿಜವಾದ ಶಿವಸೇನೆ ಯಾರದ್ದು ಎಂಬ ಪ್ರಕರಣದ ವಿಚಾರಣೆಯು ನೇರ ಪ್ರಸಾರವಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಮಾಜಿ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಬಣ ಸಲ್ಲಿಸಿದ ಅರ್ಜಿಗಳ ವಿಚಾರಣೆಯನ್ನು ನ್ಯಾ. ಡಿ.ವೈ. ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠ ವಿಚಾರಣೆ ನಡೆಸಿದೆ. ಇದರ ವಾದ ವಿವಾದ ನೇರ ಪ್ರಸಾರವಾಗಿದೆ.
2018 ಸೆ.27ರಂದು ಸುಪ್ರೀಂಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ದೀಪಕ್ ಮಿಶ್ರಾ ಅವರು ಇಂಥದೊಂದು ತೀರ್ಪು ನೀಡಿದ್ದರು. ಸಾಂವಿಧಾನಿಕ ಮಹತ್ವದ ಪ್ರಕರಣಗಳ ವಿಚಾರಣೆಯನ್ನು ನೇರ ಪ್ರಸಾರ ಮಾಡುವ ಕುರಿತಂತೆ ಅವರು ಒಂದಿಷ್ಟು ಅಭಿಪ್ರಾಯ ಹೊರ ಹಾಕಿದ್ದರು. ಪ್ರಮುಖವಾಗಿ ಸಾಂವಿಧಾನಿಕ ಪೀಠದಲ್ಲಿ ನಡೆಯುವ ಪ್ರಕರಣಗಳ ನೇರ ಪ್ರಸಾರ ಮಾಡಲು ತೀರ್ಪು ನೀಡಲಾಗಿದೆ. ನೀವು ಕಲಾಪಗಳನ್ನು ನೋಡಬೇಕು ಎಂದಾದರೆ //webcast.gov.in/scindia/ ವೆಬ್‌ಸೈಟ್‌ಗೆ ಲಾಗ್‌ಇನ್ ಆಗಬಹುದು.